ಕೋಲಾರ: ಸರ್ಕಾರದ ವತಿಯಿಂದ ಹಲವು ಮಹಾನುಭಾವರ ಜಯಂತಿಗಳನ್ನು ಆಚರಿಸುತ್ತಿದ್ದು, ಅಂತಹವರಲ್ಲಿ ಶಂಕರಚಾರ್ಯರು ಒಬ್ಬರು. ಶಂಕರಚಾರ್ಯರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಂಕರಚಾರ್ಯರ 1232 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶಂಕರಚಾರ್ಯರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ದೇವರು ಎಲ್ಲೂ ಇಲ್ಲ ನಮ್ಮೊಳಗೆ ಇದ್ದಾನೆ. ಅಹಂ ಬ್ರಹ್ಮಾಸ್ಮಿ ಎಂದು ಪ್ರತಿಪಾದಿಸಿದ ಶಂಕರಚಾರ್ಯರು ಹಲವು ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಕರ್ನಾಟಕದ ಶೃಂಗೇರಿ ಶಾರದಾ ಪೀಠವು ಒಂದಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನಾಗಾನಂದ ಕೆಂಪರಾಜು ಮಾತನಾಡಿ ನಮ್ಮ ದೇಶವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿದ್ದ ಮೂಡನಂಭಿಕೆಗಳು ಹಾಗೂ ಕಠಿಣ ಪದ್ಧತಿಗಳನ್ನು ವಿರೋಧಿಸಿ ಜೈನ ಮತ್ತು ಬೌದ್ಧ ಧರ್ಮಗಳು ಸ್ಥಾಪನೆಯಾದವು. ಹಿಂದೂ ಧರ್ಮದ ಕಠಿಣ ಆಚರಣೆಗಳನ್ನು ಸರಳತೆಗೆ ತಂದರು. ಇವರು ಭಾರತ ದೇಶವನ್ನು ಮೂರು ಬಾರಿ ಪ್ರವಾಸ ಮಾಡಿ ತಮ್ಮ ಅಗಾದ ಪಾಂಡಿತ್ಯವನ್ನು ಜನರಿಗೆ ತಿಳಿಸಿದರು. ಆತ್ಮ ಮತ್ತು ಪರಮಾತ್ಮ ಎರಡು ಒಂದೇ ಎಂಬ ಸಂದೇಶ ನೀಡಿದರು ಎಂದು ತಿಳಿಸಿದರು.
ಸಮುದಾಯದ ಮುಖಂಡರಾದ ರಾಮಕೃಷ್ಣ ಅವರು ಮಾತನಾಡಿ ಶಂಕರಚಾರ್ಯರು ತಮ್ಮ ಕಾಲದಲ್ಲಿ ಸಮಾಜದ ಪಿಡುಗುಗಳನ್ನು ಹೋಗಲಾಡಿಸಿದರು. ಇವರು ಅವಿದ್ಯೆಯನ್ನು ನಾಶ ಮಾಡಿ ಜ್ಞಾನದ ಬೆಳಕನ್ನು ಚೆಲ್ಲಿದರು. ಎಲ್ಲರೊಂದಿಗೆ ಕೂಡಿ ಸಹಬಾಳ್ವೆಯಿಂದ ಜೀವನ ನಡೆಸಬೇಕೆಂದು ಜನರಿಗೆ ತಿಳುವಳಿಕೆ ನೀಡಿದರು ಎಂದರು.
ಸಮುದಾಯದ ಮುಖಂಡರಾದ ಎನ್.ಆರ್.ಜ್ಞಾನಮೂರ್ತಿ ಮಾತನಾಡಿ ಶಂಕರಚಾರ್ಯರು 788 ರಲ್ಲಿ ಕೇರಳದ ಕಾಲಟಿಯಲ್ಲಿ ಜನಿಸಿದರು. ಬೌದ್ಧ ಧರ್ಮವು ಪ್ರಾಶಸ್ತ್ಯವನ್ನು ಕಳೆದುಕೊಳ್ಳುವ ಸಮಯದಲ್ಲಿ ಶಂಕರಚಾರ್ಯರು ತಮ್ಮ ತತ್ವಗಳನ್ನು ಪ್ರತಿಪಾದಿಸಿ ಜನರಲ್ಲಿ ಅರಿವು ಮೂಡಿಸಿದರು. ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾದುದು. ಇದರ ಸಾರ್ಥಕತೆ ಪಡೆಯಲು ಮುಕ್ತಿಯನ್ನು ಪಡೆದುಕೊಳ್ಳಬೇಕು ಎಂದು ಪ್ರತಿಪಾತಿಸಿದರು ಎಂದು ಮಾಹಿತಿ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ. ರವಿಕುಮಾರ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.