ಬೆಂಗಳೂರು ಗ್ರಾಮಾಂತರ: ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಸೌಕರ್ಯಗಳನ್ನು ಪಡೆಯಲು ಜನಸಾಮಾನ್ಯರು ಪ್ರತಿನಿತ್ಯ ಕಚೇರಿಗಳಿಗೆ ಅಲೆಯುವದನ್ನು ಕಡಿಮೆಗೊಳಿಸುವ ಉದ್ದೇಶದಿಂದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಆಯೋಜಿಸುತ್ತಿರುವುದು, ಬಡವರಿಗೆ, ರೈತರಿಗೆ ಅನುಕೂಲವಾಗಿದೆ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಎಂಟಿಬಿ ನಾಗರಾಜ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಸಹಯೋಗದಲ್ಲಿ ಇಂದು ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,
ಹೊಸಕೋಟೆ ತಾಲೂಕಿನಲ್ಲಿ ಅಧಿಕವಾಗಿರುವ ಅನೇಕ ಬಡವರಿಗೆ ಸಮರ್ಪಕ ಸೂರು ಇಲ್ಲ. ಅಂತಹವರಿಗೆ ನಿವೇಶನ ಒದಗಿಸಬೇಕು ಎಂದು ಕಂದಾಯ ಸಚಿವರಲ್ಲಿ ಮನವಿ ಮಾಡಿದಾಗ, ತಾಲೂಕಿನಲ್ಲಿ ಲಭ್ಯವಿರುವ ಗೋಮಾಳ, ಸರ್ಕಾರದ ಭೂಮಿ ಗುರುತಿಸಿ ಸುಮಾರು 10 ಸಾವಿರ ಜನ ನಿವೇಶನ ರಹಿತರಿಗೆ ಹಂಚಲು ಕ್ರಮವಹಿಸಿದ್ದಾರೆ ಎಂದು ತಿಳಿಸಿದರು.
ಅದಕ್ಕಾಗಿ ತಾಲೂಕಿನ ಸುಮಾರಿ 290 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ಗುರುತಿಸಿ, ಹಸ್ತಾಂತರ ಮಾಡುತ್ತಿರುವುದು ಮಹತ್ವದ ಕಾರ್ಯವಾಗಿದೆ. ಈ ಕಾರ್ಯದಲ್ಲಿ ಯಾವುದೇ ಜಾತಿ, ಧರ್ಮಗಳ ಭೇದವಿಲ್ಲದೆ ಎಲ್ಲ ಬಡವರಿಗೆ ನಿವೇಶನ ಒದಗಿಸುವ ಸಂಕಲ್ಪ ಇದಾಗಿದೆ.
ಫಲಾನುಭವಿಗಳ ಆಯ್ಕೆಯು ನಿಯಮಾನುಸಾರ ಪಾರದರ್ಶಕವಾಗಿ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಸುಮಾರು 28 ಸಾವಿರಕ್ಕೂ ಹೆಚ್ಚು ವಿವಿಧ ವೈಯಕ್ತಿಕ ಸವಲತ್ತುಗಳು ಇಂದು ವಿತರಣೆಯಾಗುತ್ತಿವೆ ಎಂದರು.
ಬಡ ರೈತರ ಒಕ್ಕಲೆಬ್ಬಿಸಿ ನಿವೇಶನ ಒದಗಿಸುವದಕ್ಕಿಂತ, ಖಾಲಿ ಇರುವ ಜಾಗಗಳನ್ನು ಗುರುತಿಸಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಜನಸಾಮಾನ್ಯರ ಕಲ್ಯಾಣದ ಕನಸಿನೊಂದಿಗೆ ಸರ್ಕಾರ ಜನಪರ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ, ಸಾರ್ವಜನಿಕರ ತೆರಿಗೆಯಿಂದ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಇಂದು ತೆರಿಗೆ ಪಾವತಿದಾರರ ಬಳಿಗೆ ಬಂದು ಸೌಲಭ್ಯಗಳನ್ನು ನೀಡುತ್ತಿರುವದು ಅಭಿನಂದನೀಯ ಕಾರ್ಯ ಎಂದರು.
ಹೊಸಕೋಟೆ ತಾಲೂಕಿನ ಸುಮಾರು 292 ಎಕರೆ ಸರ್ಕಾರಿ ಜಮೀನನ್ನು ಬಡ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಕ್ರಮವಹಿಸಿರುವುದು ಶ್ಲಾಘನೀಯ. ಸಾಗುವಳಿ ಚೀಟಿ ಹೊಂದಿರುವ ತಾಲೂಕಿನ ರೈತರಿಗೆ ಹಕ್ಕುಪತ್ರ ವಿತರಣೆಗೂ ಕ್ರಮವಹಿಸಬೇಕು.
ಬಡ ರೈತರನ್ನು ಒಕ್ಕಲೆಬ್ಬಿಸಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವದಕ್ಕಿಂತ, ಖಾಲಿ ಇರುವ ಜಾಗೆಗಳನ್ನು ಗುರುತಿಸಿ ನಿವೇಶನದ ಹಕ್ಕು ಪತ್ರಗಳನ್ನು ವಿತರಿಸಬೇಕು. ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಉಪನೋಂದಣಾಧಿಕಾರಿ ಕಚೇರಿ ಹಾಗೂ ತಾಲೂಕು ಆಡಳಿತ ಸೌಧ ನಿರ್ಮಿಸಬೇಕು. 5 ಕೆಜಿಗೆ ಇಳಿಸಿರುವ ಪಡಿತರ ಪ್ರಮಾಣವನ್ನು 10 ಕೆಜಿಗೆ ಹೆಚ್ಚಿಸಬೇಕು ಎಂದರು.
![](https://vijayapatha.in/wp-content/uploads/2024/02/QR-Code-VP-1-1-300x62.png)