1283 ವಾಹನ ಜಪ್ತಿ, 43 ಎಫ್‍ಐಆರ್, 7.71 ಲಕ್ಷ ರೂ. ದಂಡ
ಲಾಕ್‍ಡೌನ್ ಉಲ್ಲಂಘಿಸಿದ 31 ಜನರ ಬಂಧನ l ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಮಾಹಿತಿ
ಯಾದಗಿರಿ: ಕೊರೊನಾ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಲಾಕ್‍ಡೌನ್ ಆದೇಶವನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಇಲ್ಲಿಯವರೆಗೆ ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದ 31 ಜನರನ್ನು ಬಂಧಿಸಲಾಗಿದ್ದು, ಒಟ್ಟು 43 ಎಫ್.ಐ.ಆರ್ ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್-19 ವೈರಾಣು ಇಡೀ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತವು ಯಾದಗಿರಿ ಜಿಲ್ಲೆಯ ಗಡಿ ಭಾಗದಲ್ಲಿ ಸ್ಥಾಪಿಸಿರುವ ಒಟ್ಟು 16 ಚೆಕ್‍ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿ ಅನವಶ್ಯಕವಾಗಿ ಓಡಾಡುತ್ತಿದ್ದವರ ಒಟ್ಟು 1,283 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇಲ್ಲಿಯವರೆಗೆ 7,71,100 ರೂ. ದಂಡ ವಿಧಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಕೋವಿಡ್-19 ಪಿ-45 ಪಾಸಿಟಿವ್ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎನ್ನಲಾದ 20 ಜನರನ್ನು ನಿಗದಿತ ಯಾದಗಿರಿ ತಾಲ್ಲೂಕಿನ ಸೂಪರ್ ಕ್ವಾರಂಟೈನ್ ಸೆಂಟರ್‍ನಲ್ಲಿ ಪ್ರತ್ಯೇಕವಾಗಿರಿಸಿ, ಅವರ ಗಂಟಲಿನ ದ್ರವವನ್ನು ಪರೀಕ್ಷಿಸಿದ್ದು ನಕಾರಾತ್ಮಕ ಫಲಿತಾಂಶ ಬಂದಿದೆ. ಇನ್ನು ನಿಜಾಮುದ್ದೀನ್ ತಬ್ಲೀಘಿ ಮಾರ್ಕಾಜ್‍ದಿಂದ ಹಿಂದಿರುಗಿದ ಜಿಲ್ಲೆಯ 5 ಜನರ ಗಂಟಲಿನ ದ್ರವವನ್ನು 2 ಬಾರಿ ಪರೀಕ್ಷಿಸಲಾಗಿ ನಕಾರಾತ್ಮಕ ಫಲಿತಾಂಶ ಬಂದಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 5 ಜ್ವರ ತಪಾಸಣಾ ಕೇಂದ್ರ ತೆರೆಯಲಾಗಿದೆ ಮತ್ತು 6 ಆರ್‍ಆರ್‍ಟಿ ತಂಡಗಳ ಮೂಲಕ ಜ್ವರ ತಪಾಸಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಜ್ವರ ತಪಾಸಣೆ ಕೇಂದ್ರಗಳಲ್ಲಿ ಒಟ್ಟು 17,170 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಉಸಿರಾಟದ ತೊಂದರೆ ಮತ್ತು ಜ್ವರ ಇರುವವರ ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ಕಳಿಸಲಾಗುತ್ತಿದೆ ಎಂದರು.
ಅನುದಾನ ಕೊರತೆ ಇಲ್ಲ
ಕೊರೊನಾ ವೈರಸ್ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲಾಗಿದ್ದು, ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿರುವ ವಿಪತ್ತು ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ. ಪಿ.ಡಿ ಖಾತೆಯಲ್ಲಿ 18 ಕೋಟಿ ರೂ. ಇದ್ದು, 3.5 ಕೋಟಿ ರೂ. ಖರ್ಚಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ಜಿಲ್ಲೆಯ ಚೆಕ್‍ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ತುರ್ತು ಸೇವೆಗಳ ವಾಹನ ಮತ್ತು ಸರಕು ಸಾಗಣೆ ವಾಹನಗಳನ್ನು ಮಾತ್ರ ಚೆಕ್‍ಪೋಸ್ಟ್‍ಗಳಲ್ಲಿ ಬಿಡಲಾಗುತ್ತಿದೆ. ವೈದ್ಯಕೀಯ ಸೌಲಭ್ಯಕ್ಕಾಗಿ ಅಂತರ್‍ಜಿಲ್ಲೆ ಪಾಸ್ ಇದ್ದವರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಜಿಲ್ಲೆಯಾದ್ಯಂತ ಪ್ರತಿದಿನ ಅಬಕಾರಿ ದಾಳಿಗಳನ್ನು ಕೂಡ ನಡೆಸಲಾಗುತ್ತಿದೆ. ಇನ್ನು ಅನವಶ್ಯಕವಾಗಿ ಮನೆಯಿಂದ ಹೊರಬಂದವರ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದ್ದು, ಈ ವಾಹನಗಳನ್ನು ಲಾಕ್‍ಡೌನ್ ಮುಗಿಯುವವರೆಗೂ ಮರಳಿಸುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಉಪಸ್ಥಿತರಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)