NEWSನಮ್ಮರಾಜ್ಯರಾಜಕೀಯ

ವಿದ್ಯುತ್ ಖರೀದಿಯಲ್ಲಿ 3400 ಕೋಟಿ ರೂ. ಹಗರಣ: ದಾಖಲೆ ಬಿಡುಗಡೆ ಮಾಡಿದ ಪೃಥ್ವಿ ರೆಡ್ಡಿ

ಅದಾನಿಗೆ ಅನುಕೂಲ ಮಾಡಲು 6 ಕೋಟಿ ಕನ್ನಡಿಗರ ಮೇಲೆ ಹೊರೆ ಹಾಕುತ್ತಿದೆ ಬಿಜೆಪಿ ಸರ್ಕಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅದಾನಿಗೆ ಅನುಕೂಲ ಮಾಡಲು 6 ಕೋಟಿ ಕನ್ನಡಿಗರ ಮೇಲೆ ಬಿಜೆಪಿ ಸರ್ಕಾರ ಹೊರೆ ಹಾಕುತ್ತಿದೆ. ಅಲ್ಲದೆ ವಿದ್ಯುತ್‌ ಖರೀದಿಯಲ್ಲಿ ಬಿಜೆಪಿ ಸರಕಾರದಿಂದ 3400 ಕೋಟಿ ರೂಪಾಯಿಗಳ ಬೃಹತ್‌ ಹಗರಣ ನಡೆದಿದೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ತಿಂಗಳ 12 ನೇ ತಾರೀಕಿನಂದು ಶಾಕ್‌ ಬೇಡಾ ಎನ್ನುವ ಅಭಿಯಾನವನ್ನು ಆಮ್ ಆದ್ಮಿ ಪಕ್ಷ ಪ್ರಾರಂಭಿಸಿತ್ತು ಮತ್ತು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ “ಬಿಲ್ ಕಡಿಮೆ ಮಾಡಿ, ಇಲ್ಲ ಜಾಗ ಮಾಡಿ” ಎಂದು 19ನೇ ತಾರೀಕಿನಂದು ಸವಾಲು ಹಾಕಿತ್ತು, ಈ ಸವಾಲಿಗೆ ಕಿಂಚಿತ್ತೂ ಸ್ಪಂದಿಸದ ಸರ್ಕಾರದ ಮೌನಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.

ಕೊರೊನಾ ಸೋಂಕಿನ ಇಂತಹ ಸಂಕಷ್ಟದ ಸಮಯದಲ್ಲಿ ಜನರ ಲೂಟಿ ಹೊಡೆಯುತ್ತಿರುವ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಹೇಗೆ ಅದಾನಿ ಕಂಪನಿಯ ಜೇಬು ತುಂಬಿಸಲು ಹೊರಟಿದೆ‌ ಎಂಬುದಕ್ಕೆ ಇಲ್ಲಿದೆ ನಿದರ್ಶನ.

  1. ಉಡುಪಿ ವಿದ್ಯುತ್ ಸ್ಥಾವರ 2010 ರಲ್ಲಿ 600 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಇದನ್ನು 2014 ರಲ್ಲಿ ಅದಾನಿ ಪವರ್ ಖರೀದಿಸಿತು. ಪ್ರಸ್ತುತ 2000 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದು ಅದರಲ್ಲಿ 1800 ಮೆಗಾವ್ಯಾಟ್ (90%) ಅನ್ನು ಸರ್ಕಾರ ಖರೀದಿಸುತ್ತಿದೆ.
  2.  2018 ರಲ್ಲಿ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗದ (ಸಿಇಆರ್‌ಸಿ) ಪ್ರಕಾರ ರಾಷ್ಟ್ರೀಯ ಸರಾಸರಿ ವಿದ್ಯುತ್ ಖರೀದಿ ವೆಚ್ಚ (ಎನ್‌ಎಪಿಸಿ) ಯುನಿಟ್‌ಗೆ 3.53 ರೂ. ಮತ್ತು ಕಳೆದ ಐದು ವರ್ಷಗಳಲ್ಲಿ ಸರಾಸರಿ ಹೆಚ್ಚಳವು ವರ್ಷಕ್ಕೆ 2% ಕ್ಕಿಂತ ಕಡಿಮೆಯಿದೆ.
  3.  ಅದಾನಿ ಪವರ್ ಒಡೆತನದ ಉಡುಪಿ ಪವರ್‌ಗೆ ಕಳೆದ ಎರಡು ವರ್ಷಗಳಲ್ಲಿ ವಿದ್ಯುತ್ ಖರೀದಿ ಬೆಲೆಯಲ್ಲಿ 42% ಹೆಚ್ಚಳ ಮಾಡಿ ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡಿದೆ- 2018 ರಲ್ಲಿ ಪ್ರತಿ ಯೂನಿಟ್‌ಗೆ 4.76 ರೂ.ಗಳಿಂದ 2020 ರಲ್ಲಿ 6.80 ರೂ.ಗೆ ಏರಿಸಿದ್ದು. ಇದು ಬೆಸ್ಕಾಂಗೆ ಸಾಕಷ್ಟು ಹೊರೆಯಾಗಿದೆ.
  4.  2019ರಲ್ಲಿ ಅದಾನಿ ಕಂಪೆನಿಯಿಂದ ವಿದ್ಯುತ್ ಖರೀದಿಸಿದ ಒಟ್ಟು ಬಿಲ್ ರೂ 1224 ಕೋಟಿ. ಎಪಿಪಿಸಿ ಬೆಲೆಗೆ ಹೋಲಿಸಿದರೆ 563 ಕೋಟಿಗಳಷ್ಟು ಹೆಚ್ಚು ಪಾವತಿ ಮಾಡಿದೆ.
  5. ಹೆಚ್ಚಿನ ದರಕ್ಕೆ ಕರ್ನಾಟಕ ಸರ್ಕಾರ ವಿದ್ಯುತ್ ಖರೀದಿಸಿದ ಈ ಎರಡು ವರ್ಷಗಳಲ್ಲಿ ಕಲ್ಲಿದ್ದಿಲಿನ ಬೆಲೆ 40% -50% ರಷ್ಟು ಕಡಿಮೆ ಆಗಿದೆ. ಇದರಿಂದ ಅದಾನಿ ಕಂಪೆನಿ ಸುಮಾರು 450 ಕೋಟಿ ರೂ ಹೆಚ್ಚುವರಿ ಲಾಭ ಮಾಡಿದೆ, ಆದರೂ ರಾಜ್ಯ ಬಿಜೆಪಿ ಸರ್ಕಾರ ಜನರ ಮೇಲೆ ವಿದ್ಯುತ್ ದರ ಹೆಚ್ಚಳದ ಮೂಲಕ ಈ ಹೊರೆ ಹಾಕಿದೆ.
  6. ಶೇ 6 ವಿದ್ಯುತ್ ದರದ ಹೆಚ್ಚಳದ ಮೌಲ್ಯ ಸುಮಾರು 250 ಕೋಟಿ ರೂಪಾಯಿ. ಇದನ್ನು ಗ್ರಾಹಕರಿಂದ ಸುಲಿಗೆ ಮಾಡಲಾಗಿದೆ. ಇದು ಅದಾನಿಯ ಜೇಬು ತುಂಬಿಸಿದೆ ಹೊರತು ಸರ್ಕಾರದ್ದಲ್ಲ.
  7. ಪ್ರತಿ ವರ್ಷ ಶೇ 10 ಹೆಚ್ಚು ಹಣ ಕೊಟ್ಟು ಖರೀದಿಸಿರುವ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್‌ಸಿ) ತಿಳಿಸಿರುವ ಸರಾಸರಿ ಬೆಲೆಗಿಂತ 2.5 ಹೆಚ್ಚಿನ ಮೊತ್ತವನ್ನು ಪಾವತಿ ಮಾಡಲಾಗಿದೆ.
  8. ಕಳೆದ 10 ವರ್ಷಗಳಿಂದ ಇಂಧನ ಇಲಾಖೆಯ ಸಚಿವಗಿರಿಗೆ ನಡೆದಿರುವ ಪೈಪೋಟಿಯನ್ನೆ ನೋಡಿದರೆ ಗೊತ್ತಾಗುತ್ತದೆ ಎಷ್ಟರ ಮಟ್ಟಿಗೆ ಜನರನ್ನು ಸುಲಿಗೆ ಮಾಡಲಾಗಿದೆ ಎಂಬುದು. ಇಂಧನ ಇಲಾಖೆಯ ಸಚಿವರಾಗಿ ಅಧಿಕಾರ ಅನುಭವಿಸಿದ ಬಿಜೆಪಿಯ ಶೋಭಾ ಕರಂದ್ಲಾಜೆ, ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್, ಜೆಡಿಎಸ್‌ನ ಎಚ್.ಡಿ.ರೇವಣ್ಣ, ಈಗ ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲರೂ ಜನರ ಬೆನ್ನಿಗೆ ಚೂರಿ ಹಾಕಿದವರೇ ಎಂದರು.

ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ 2020 ರ ಸೆಪ್ಟೆಂಬರ್ ನಲ್ಲಿ ನೀಡಿದ ವರದಿಯ ಪ್ರಕಾರ ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದನೆ ಮಾಡುವ 168 ಸ್ಥಾವರಗಳು ನಮ್ಮ ದೇಶದಲ್ಲಿ ಇದ್ದು ಪ್ರತಿ ಕಿಲೋ ವ್ಯಾಟ್‌ಗೆ 4.07 ರೂ ಖರ್ಚಾಗುತ್ತದೆ ಎಂದು ತಿಳಿಸಿದೆ. ಆದರೆ ನಮ್ಮ ಕರ್ನಾಟಕ ಸರ್ಕಾರ ಹೆಚ್ಚುವರಿ ಹಣ ನೀಡಿ ಖರೀದಿಸಿದೆ.

ಇನ್‌ಸ್ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಪಾಲಿಸಿ ಅನಾಲಿಸಿಸ್ ನಡೆಸಿದ ಅಧ್ಯಯನದ ಪ್ರಕಾರ ಕಡಿಮೆ ವೆಚ್ಚದಲ್ಲಿ ಅಗ್ಗದ ಮತ್ತು ನವೀಕರಿಸಬಹುದಾದ ವಿದ್ಯುತ್ ಲಭ್ಯವಿದೆ ಆದರೂ ಸರ್ಕಾರಕ್ಕೆ ಉಡುಪಿಯ ಅದಾನಿ ಒಡೆತನದ ವಿದ್ಯುತ್ ಕಂಪೆನಿ ಮೇಲೆ ಏಕೆ ಮೋಹ? ಕಳೆದ 10 ವರ್ಷಗಳಲ್ಲಿ ವಿದ್ಯುತ್ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ ಎಂದು ಹೇಳಿದರು.

ಆಮ್‌ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ಸದಂ ಉಪಸ್ಥಿತರಿದ್ದರು.

  • ಆಮ್ ಆದ್ಮಿ ಪಕ್ಷದ ಪ್ರಮುಖ ಒತ್ತಾಯಗಳು
    1.ವಿದ್ಯುತ್ ದರ ಹೆಚ್ಚಳವನ್ನು ಈ ಕೂಡಲೇ ಸರ್ಕಾರ ಕಡಿಮೆ ಮಾಡಬೇಕು.
    2.ಅದಾನಿ ಕಂಪೆನಿ ಒಡೆತನದ ಉಡುಪಿ ಪವರ್‌ನ ಸಂಪೂರ್ಣ ಲೆಕ್ಕ ಪರಿಶೋಧನೆ ನಡೆಸುವಂತೆ ಆದೇಶ ನೀಡಬೇಕು.
    3.ಸರ್ಕಾರ ಹೆಚ್ಚುವರಿಯಾಗಿ ಪಾವತಿಸಿರುವ ಹಣವನ್ನು ಹಿಂಪಡೆಯಬೇಕು.
    4.1600 ಮೆಗಾವ್ಯಾಟ್ ವಿದ್ಯುತ್ ನಮ್ಮ ರಾಜ್ಯದ ಬಳಕೆಗೆ ಈಗಾಗಲೇ ಹೆಚ್ಚುವರಿ ಆಗಿದ್ದು, ಇದು ಬೇಕೆ ಬೇಡವೇ ಎಂದು ತಕ್ಷಣ ಪರಿಶೀಲನೆ ನಡೆಸಬೇಕು.
    5.ಏಕೆಂದರೆ ಈಗಾಗಲೇ ಸಾಕಷ್ಟು ವಿದ್ಯುತ್ ನಮ್ಮ ರಾಜ್ಯದಲ್ಲಿ ಅಗ್ಗದ ಬೆಲೆಗೆ ಲಭ್ಯವಿದೆ.
    6.ಸುಲಿಗೆ ಮಾಡಿರುವ ಅದಾನಿ ಕಂಪೆನಿಯಿಂದ ಹಣವನ್ನು ವಸೂಲಿ ಮಾಡಿ ಆ ಲಾಭವನ್ನು ಜನರಿಗೆ ತಲುಪಿಸಬೇಕು.
    7.ಮತ್ತೊಮ್ಮೆ ಆಮ್ ಆದ್ಮಿ ಪಕ್ಷ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದು “ಬಿಲ್ ಕಡಿಮೆ ಮಾಡಿ, ಇಲ್ಲ ಜಾಗ ಖಾಲಿ ಮಾಡಿ” ಎಂದು ಪುನರುಚ್ಚರಿಸುತ್ತದೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ