ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳಕ್ಕಾಗಿ ನಾಲ್ಕು ವರ್ಷಕ್ಕೊಮ್ಮೆ ಸರ್ಕಾರದೊಂದಿಗೆ ಚೌಕಾಸಿ ನಡೆಸುವ ಬದಲು ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸೇನೆ ಆಗ್ರಹಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಹೆಚ್ಚಳಕ್ಕಾಗಿ ಡಿ.31ರಂದು ಚೌಕಾಸಿಗಾಗಿ ನಡೆಸುವ ಮುಷ್ಕರಕ್ಕೆ ಬೆಂಬಲವಿಲ್ಲ ಎಂದು ಗುರುವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೇನೆಯ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಸಾರಿಗೆ ನೌಕರರಿಗೂ 7ನೇ ವೇತನ ಆಯೋಗ ಜಾರಿ ಮಾಡಬೇಕು. 2020ರ ಜ.1ರಿಂದ ಶೇ.15 ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಒಂದೇ ಕಂತಿನಲ್ಲಿ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಸಾರಿಗೆ ನಿಗಮಗಳಿಗೆ ಖಾಸಗಿ ಎಲೆಕ್ಟ್ರಿಕ್ ಬಸ್ ಒದಗಿಸುವುದನ್ನು ನಿಲ್ಲಿಸಬೇಕು ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಕಂಪನಿಗಳಿಗೆ ಸಬ್ಸಿಡಿ ಒದಗಿಸುವ ಬದಲು ನಿಗಮಗಳಿಗೇ ನೀಡಬೇಕು ಎಂದು ಆಗ್ರಹಿಸಿದರು.
ಇನ್ನು ಸಾರಿಗೆ ನಿಗಮಗಳು ಖರೀದಿಸುತ್ತಿರುವ ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬೇಕು. 2021ರ ಮುಷ್ಕರದಲ್ಲಿ ಭಾಗಿಯಾದ ಕಾರಣಕ್ಕೆ ವಜಾ ಮಾಡಿದವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ವರ್ಗಾವಣೆ ಮಾಡಿದವರನ್ನು ಮೂಲ ಸ್ಥಳಕ್ಕೆ ಮತ್ತೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಕೆಲಸದಿಂದ ವಜಾಗೊಂಡು, ಆತ್ಮಹತ್ಯೆ ಮಾಡಿಕೊಂಡವರ, ಇನ್ನಿತರ ಕಾರಣಗಳಿಂದ ಮೃತರಾದ ನೌಕರರ ಕುಟುಂಬದ ಸದಸ್ಯೆರಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕು, ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನಿಗಮಗಳ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಯ ಪರವಾನಗಿ ನವೀಕರಣಗಳನ್ನು ಮಾಡಿಸುವ ಜವಾಬ್ದಾರಿ ಸಂಸ್ಥೆಯದಾಗಬೇಕು. ಟಿಸಿ, ಎಟಿಐ, ಟಿಐ ಮತ್ತು ಎಟಿಎಸ್ ಅಧಿಕಾರಿ ಸಿಬ್ಬಂದಿಗೆ 8 ಗಂಟೆಗಳ ಕರ್ತವ್ಯ ಸಮಯವನ್ನು ನಿಗದಿಪಡಿಸಿ, ಹೆಚ್ಚುವರಿ ಕೆಲಸಕ್ಕೆ ಅಧಿಕ ವೇತನ ನೀಡಬೇಕು ಎಂದು ತಾಕೀತು ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸೇನೆ ಅಧ್ಯಕ್ಷೆ ಜಮೀಲ ಬಿ. ಕಾರ್ಯಾಧ್ಯಕ್ಷ ಯೋಗೇಶ ಸಿ.ಎಚ್. ಸಂಘಟನಾ ಕಾರ್ಯದರ್ಶಿ ಜಗನ್ನಾಥ ಕೆ.ಕೆ. ಭಾಗವಹಿಸಿದ್ದರು.