ಮೈಸೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಒಂದು ವರ್ಷದಲ್ಲಿ ಐದು ಸಾವಿರ ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಗಭೀರವಾದ ಆರೋಪ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ವಿಜಯೇಂದ್ರ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸೂಪರ್ ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರ ಪಕ್ಷದ ಶಾಸಕರೇ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ ಎಂದು ಬಿಜೆಪಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರವನ್ನು ಬಿಡುಗಡೆ ಮಾಡಿದರು.
ಬಿಜೆಪಿ ಶಾಸಕರೇ ಸಹಿ ಮಾಡಿ ವಿಜಯೇಂದ್ರ ವಿರುದ್ಧ ಪಕ್ಷ ವರಿಷ್ಠರಿಗೆ ಬರೆದಿರುವ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ ಎಂಬುವುದು ಈ ಪತ್ರದಿಂದ ತಿಳಿಯಲಿದೆ ಎಂದು ಹೇಳಿದರು.
ಇಷ್ಟೇ ಅಲ್ಲದೇ ಈ ಕುರಿತು ಆಡಿಯೋ ಮತ್ತು ವಿಡಿಯೋ ಕ್ಲಿಪಿಂಗ್‌ಗಳನ್ನು ನಾವು ಕ್ರೂಢೀಕರಿಸಿದ್ದು, ಸೆಪ್ಟೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ನ್ಯೂಡೆಲ್ಲಿಯಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.
ವಿಜಯೇಂದ್ರ 32 ಜನರ ಕೂಟ ರಚಿಸಿಕೊಂಡು ಪರ್ಯಾಯ ಸರ್ಕಾರ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದು, ಏಳು ಜನ ಶಾಸಕರು ಸಹಿ ಹಾಕಿರುವ ಪತ್ರ ಇದಾಗಿದೆ. ಹೀಗಾಗಿ ಈ ಪತ್ರದಲ್ಲಿ ಮಾಡಲಾಗಿರುವ ಆರೋಪ ಕುರಿತು ಪರಿಶೀಲಿಸಬೇಕಿದೆ. ಇದಕ್ಕಾಗಿ 10 ದಿನಗಳ ಗಡುವು ಸಹ ನೀಡಲಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ಅಥವಾ ವಿಶೇಷ ತನಿಖೆ ನಡೆಸಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.