ಚಿತ್ರದುರ್ಗ: ಮಂಗಳಮುಖಿಯರು ಎಂದರೆ ನಮಗೆ ತಕ್ಷಣ ಬರುವುದು ಭಿಕ್ಷೆ ಬೇಡಿ ಜೀವನ ನಡೆಸುವವರು ಎಂದು, ಆದರೆ ಇಲ್ಲೊಬ್ಬಳು ಮಂಗಳಮುಖಿ ಅದಕ್ಕೆ ವಿರುದ್ಧವಾಗಿ ಸ್ವಾ ಭಿಮಾನದ ಬದುಕು ಕಟ್ಟಕೊಂಡಿದ್ದರು. ಅದನ್ನು ಸಹಿಸದ ಕೆಲ ದುಷ್ಕರ್ಮಿಗಳು ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಭಿಕ್ಷೆ ಬೇಡುತ್ತಾ ತಮ್ಮ ಜೀವನ ಸಾಗಿಸುವ ಮಂಗಳಮುಖಿ ನಡುವೇ ಅಪರೂಪದ ವ್ಯಕ್ತಿತ್ವ ಎನಿಸಿದ್ದ ಅಂಜಲಿ (34) ಕೊಲೆಯಾದ ಮಂಗಳಮುಖಿ. ಈಕೆ ಯಾರಿಗೂ ಬಾರವಾಗದೇ ತನ್ನಲ್ಲಿದ್ದ ಕಲೆಯನ್ನೇ ಬಂಡವಾಳವಾಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆದರೆ ಅವರ ಏಳಿಗೆ ಸಹಿಸದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಈಕೆ ಚಿತ್ರದುರ್ಗದ ಗಾಂಧಿ ನಗರದಲ್ಲಿ ಬಾಡಿಗೆ ಮನೆಮಾಡಿಕೊಂಡಿದ್ದರು. ಜೀವನಕ್ಕಾಗಿ ತನ್ನಲ್ಲಿದ್ದ ನೃತ್ಯ, ಕರಗ ಹಾಗೂ ನಟನೆ ಕಲೆಯನ್ನೇ ಬಂಡವಾಳವನ್ನಾಗಿಸಿಕೊಂಡಿದ್ದರು. ಆದರೆ ಶುಕ್ರವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಂಜಲಿ, ಪಾಲವ್ವನಹಳ್ಳಿ ಬಳಿಯ ಜಮೀನಿನಲ್ಲಿ ಭಾನುವಾರ ಬರ್ಬರವಾಗಿ ಕೊಲೆಯಾಗಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಮೂರು ವರ್ಷಗಳಿಂದ ಚಿತ್ರದುರ್ಗದಲ್ಲಿ ನೆಲೆಸಿದ್ದ ಈಕೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ಗೌರವ ಧನ ಪಡೆಯುತಿದ್ದಳು. ಆದರೆ ಈಕೆಯ ಏಳಿಗೆ ಸಹಿಸದ ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಆ ಕೊಲೆ ಪಾತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿರಿಯ ಮಂಗಳಮುಖಿಯೊಬ್ಬರು ಹೇಳಿದ್ದಾರೆ.
ಅಂಜಲಿಯೊಂದಿಗೆ ಹೆಚ್ಚಿನ ಒಡನಾಟ ಹಾಗೂ ಬಾಂಧವ್ಯವನ್ನು ಹೊಂದಿದ್ದ ಚಿತ್ರದುರ್ಗದ ಮಂಗಳಮುಖಿಯರು ಘಟನಾ ಸ್ಥಳಕ್ಕೆ ಬಂದು ಕಣ್ಣೀರಿಟ್ಟಿದ್ದಾರೆ. ಸ್ಥಳಕ್ಕೆ ಎಸ್‌ಪಿ ರಾಧಿಕಾ ಹಾಗೂ ಎಎಸ್‍ಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ದೂರು ದಾಖಲಿಸಿಕೊಂಡಿರುವ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.