ಬೆಂಗಳೂರು: ನಟ ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸರ್ಜಾ ಕುಟುಂಬ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಚಿರು ಸರ್ಜಾ ಸಾವಿನ ಬಗ್ಗೆ ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಅವರ ವಿರುದ್ಧ ಕಾನೂನಿನಡಿ ತಕ್ಕ ಪಾಠಕಲಿಸಲು ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗುತ್ತಿದೆ ಎನ್ನಲಾಗಿದೆ.
ಸರ್ಜಾ ಕುಟುಂಬದಸ್ಥರು ಈ ಸಂಬಂಧ ಖ್ಯಾತ ವಕೀಲರೊಬ್ಬರನ್ನು ಸಂಪರ್ಕಿಸಿ ಮಾತುಕತೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಚಿರಂಜೀವಿ ಸರ್ಜಾ ಸಾವಿನ ವಿಚಾರ ಎಳೆದು ತಂದಿದ್ದಕ್ಕೆ ಸರ್ಜಾ ಕುಟುಂಬದವರು ಇಂದ್ರಜಿತ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ ಸೋಮವಾರ ಸ್ಯಾಂಡಲ್ವುಡ್ನಲ್ಲಿ ಯಾರಿಗೆಲ್ಲಾ ಡ್ರಗ್ಸ್ ನಂಟಿದೆ, ಯಾರೆಲ್ಲಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಅನ್ನೋದರ ಬಗ್ಗೆ ಇಂದ್ರಜಿತ್ ಸಿಸಿಬಿ ಪೊಲೀಸರ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ.
ಚಿರು ಬಗ್ಗೆ ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಸೋಮವಾರ ಇಂದ್ರಜಿತ್ ಹೇಳಿದ್ದು, ಚಿರಂಜೀವಿ ಸರ್ಜಾ ಯುವ ನಟರಾಗಿದ್ದರಿಂದಲೇ ನಾನು ಹೇಳಿದ್ದೆ. ಸರ್ಜಾ ಅವರ ಬಗ್ಗೆ ನನಗೆ ಹೆಚ್ಚು ನೋವಿದೆ. ಆದರೆ ಈ ಮೂಲಕ ಹೇಳುತ್ತಿರುವುದೇನೆಂದರೇ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಡ್ರಗ್ ಮಾಫಿಯಾ ಎಂಬುವುದು ಬಹುದೊಡ್ಡದಾಗಿದೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಲು ಆಗದಿದ್ದರೂ ಯುವ ಜನತೆಗೆ ಒಂದು ಸಂದೇಶ ರವಾನೆ ಆಗಲಿ ಎಂಬುವುದಷ್ಟೇ ನನ್ನ ಉದ್ದೇಶ ಎಂದು ಸ್ಪಷ್ಟಪಡಿಸಿದ್ದರು.
ಇಂದ್ರಜಿತ್ ಹೇಳಿಕೆಯಿಂದ ಮಾನಸಿಕ ವೇದನೆ ಅನುಭವಿಸುತ್ತಿರುವ ಕುಟುಂಬ ಇವರ ಕ್ಷಮೆಯಿಂದ ತೃಪ್ತರಾಗಿಲ್ಲ. ಹೀಗಾಗಿ ಸೂಕ್ತ ಪರಿಹಾರಕ್ಕೆ ಕಾನೂನು ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.
Olledagali