ನ್ಯೂಡೆಲ್ಲಿ: ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅಂತ್ಯಕ್ರಿಯೆ ಇಲ್ಲಿನ ಲೋದಿ ರಸ್ತೆಯಲ್ಲಿ ಚಿತಾಗಾರಾದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಪ್ರಣವ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ತಮ್ಮ ತಂದೆಯ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿಸಿದರು.
ಪಿಪಿಇ ಕಿಟ್ ಧರಿಸಿದ ಕುಟುಂಬದ ಸದಸ್ಯರು, ಸಂಬಂಧಿಕರು ಅಂತಿಮ ವಿಧಿ ವಿಧಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸರ್ಕಾರಿ ಮತ್ತು ಮಿಲಿಟರಿ ಗೌರವಗಳನ್ನು ಸಮರ್ಪಿಸಲಾಯಿತು.
ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು. ಈ ವೇಳೆ ಆರು ಅಡಿ ಅಂತರ ಕಾಯ್ದುಕೊಳ್ಳುವುದರೊಂದಿಗೆ ಮಾಸ್ಕ್ ಕಡ್ಡಾಯಪಡಿಸಲಾಗಿತ್ತು.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೀರ್ಘಕಾಲದ ಅನಾರೋಗ್ಯದ ನಂತರ ನ್ಯೂಡೆಲ್ಲಿಯ ಆರ್ ಆರ್ ಸೇನಾ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.ಗಂಭೀರ ಸ್ಥಿತಿಯಲ್ಲಿ ಮುಖರ್ಜಿ ಅವರನ್ನು ಆಗಸ್ಟ್ 10 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಕಾರಣ ತುರ್ತು ಜೀವ ಉಳಿಸುವ ಶಸ್ತ್ರಚಿಕಿತ್ಸೆ ಜತೆಗೆ ಕೋವಿಡ್ ಸೋಂಕಿಗೂ ಒಳಗಾಗಿದ್ದರು.
ಅಜಾತಶತ್ರುವಿನ ಅಂತಿಮ ದರ್ಶನ
ಅಜಾತಶತ್ರು, ದೇಶ ಕಂಡ ಮುತ್ಸದ್ಧಿ ರಾಜಕಾರಣಿ ಪ್ರಣಬ್ ಮುಖರ್ಜಿಯವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪುಷ್ಪನಮನ ಸಲ್ಲಿಸಿದರು.
ಇದಕ್ಕೂ ಮುನ್ನ ರಾಜಾಜಿ ರಸ್ತೆಯಲ್ಲಿರುವ ಪ್ರಣಬ್ ಅವರ ನಿವಾಸಕ್ಕೆ ಭೇಟಿ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ, ವಾಯುಸೇನೆ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ, ನೌಕಾಪಡೆ ಮುಖ್ಯಸ್ಥ ಕರಂಬಿರ್ ಸಿಂಗ್ ಅವರು ಅಂತಿಮ ದರ್ಶನ ಪಡೆದರು.
ರಾಜ್ಯದ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತಿಗಳಾದ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Om shanthi