ಬೆಂಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು. ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸಮಚಿತ್ತದಲ್ಲಿ ಇರುತ್ತೇನೆ. ಅಧಿಕಾರದ ಅಮಲು ಕೆಲವರಿಗೆ ಮಾತ್ರ ತೆವಲು ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸಿ.ಟಿ. ರವಿ ಬೇರೆಯವರ ಬಗ್ಗೆ ಮಾತನಾಡಿದಂತೆ ನನ್ನ ಬಗ್ಗೆ ಮಾತನಾಡಿದರೆ ನಾನು ಸುಮ್ಮನಿರಲ್ಲ. ಅಧಿಕಾರದಲ್ಲಿ ಇರುವ ಸಚಿವರು ಮಾತಿನಲ್ಲಿ ನಿಗಾ ಇಡುವುದು ಒಳಿತು ಎಚ್ಚರಿಕೆ ನೀಡಿದ್ದಾರೆ.
ನಾನು ಮುಖ್ಯಮಂತ್ರಿ ಆಗಿದ್ದಾಗ ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ, ಮೀಟರ್ ಬಡ್ಡಿ ಹತ್ತಿಕ್ಕಲು ವಿಶೇಷ ತಂಡ ರಚಿಸಿದ್ದೆ. ಇದರಿಂದ ಕಮರಿ ಹೋಗಿದ್ದ ದಂಧೆಕೋರರು ಶ್ರೀಲಂಕಾ ಹಾಗೂ ಮುಂಬೈಗೆ ಹಾರಿ ಹೋಗಿದ್ದರು. ಆಮೇಲೆ ಶಾಸಕರನ್ನು ಮುಂಬೈಗೆ ಕರೆದೊಯ್ಯುವಾಗ ಶಾಸಕರ ಜೊತೆ ಕಂಪನಿ ಕೊಟ್ಟಿದ್ದರು ಎಂದು ಹೇಳಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್, ಮಾಫಿಯಾ ಬಳಸಿಕೊಂಡೇ ನಮ್ಮ ಸರಕಾರದಲ್ಲಿದ್ದ ಶಾಸಕರನ್ನು ಬಿಜೆಪಿಯವರು ಬುಕ್ ಮಾಡಿಕೊಂಡಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಎರಡು ಗಂಟೆಗೊಂದು ವಿಶೇಷ ವಿಮಾನದ ಮೂಲಕ ಕರೆದುಕೊಂಡು ಹೋದಾಗ ಯಾರು ಜೊತೆಯಲ್ಲಿ ಇದ್ದರು ಎಂಬುದು ಇಡೀ ನಾಡಿಗೆ ಗೊತ್ತಿದೆ ಎಂದು ಮೊನಚಾದ ಮಾತನಲ್ಲೇ ತಿವಿದಿದ್ದಾರೆ.
ಶಾಸಕರನ್ನು ಖರೀದಿ ಮಾಡಿ, ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾದ ಪಾಪದ ಹಣವನ್ನು ಚೆಲ್ಲಿ ಸರ್ಕಾರ ಉಳಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಅಂತಹ ಕುಕೃತ್ಯಕ್ಕೆ ಇಳಿಯುವ ಜಾಯಮಾನ ನನ್ನದಾಗಿದ್ದರೆ ನನ್ನ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಖಜಾನೆಗೆ 25 ಸಾವಿರ ಕೋಟಿ ಹಣವನ್ನು ಸಂಗ್ರಹಿಸಿ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ನಾನು. ಹೀಗಾಗಿ ಲೂಟಿ ಮಾಡಿದವರು ಅಧಿಕಾರದ ಅಮಲಿನಲ್ಲಿ ತೇಲಾಡುವಾಗ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳಬೇಕಾಗಿಲ್ಲ ಎಂದು ಬಿಜೆಪಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಈ ಸರ್ಕಾರಕ್ಕೆ ಪ್ರಕೃತಿಯು ಸಹಕರಿಸುತ್ತಿಲ್ಲ. ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಅದು ಬಿಟ್ಟು ಬಾಯಿ ಚಪಲಕ್ಕೆ ಮಾತನಾಡುವ ಅಧಿಕಾರದ ಅಮಲು ಬಹಳ ಕಾಲ ಉಳಿಯುವುದಿಲ್ಲ ಎಂದು ತೀಕ್ಷ್ಣವಾದ ಸಲಹೆಯನ್ನೂ ಎಚ್ಡಿಕೆ ನೀಡಿದ್ದಾರೆ.
ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಈ ಸರ್ಕಾರಕ್ಕೆ ಪ್ರಕೃತಿಯು ಸಹಕರಿಸುತ್ತಿಲ್ಲ. ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಅದು ಬಿಟ್ಟು ಬಾಯಿ ಚಪಲಕ್ಕೆ ಮಾತನಾಡುವ ಅಧಿಕಾರದ ಅಮಲು ಬಹಳ ಕಾಲ ಉಳಿಯುವುದಿಲ್ಲ.
7/8— H D Kumaraswamy (@hd_kumaraswamy) September 1, 2020
Super statement anna