ತಿ.ನರಸೀಪುರ: ಕೃಷಿ ಹೊಂಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಕೊಡಲು ರೈತರೊಬ್ಬರಿಗೆ ಲಂಚದ ಬೇಡಿಕೆ ಇಟ್ಟ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ( ಪಿಡಿಒ) ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರೇಶ್ ಎಂಬವರೇ ಎಸಿಬಿ ಬಲೆಗೆ ಬಿದ್ದವರು. ಕೃಷಿ ಹೊಂಡ ಮಂಜೂರು ಮಾಡಬೇಕೆಂದರೆ 20ಸಾವಿರ ರೂ. ಲಂಚ ನೀಡಬೇಕು ಎಂದು
ಯಾಚೇನಹಳ್ಳಿ ರೈತ ಹೇಮಂತ್ ಅವರ ಮೇಲೆ ಪಿಡಿಒ ಚಂದ್ರೇಶ್ ಒತ್ತಡ ಹೇರಿದ್ದರು. ಇದರಿಂದ ಬೇಸತ್ತ ಹೇಮಂತ್ ಈ ಕುರಿತು ಎಸಿಬಿಗೆ ಚಂದ್ರೇಶ್ ವಿರುದ್ಧ
ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಎಸಿಬಿ ಪೊಲೀಸರು ಹೇಮಂತ್ ಅವರಿಂದ 20ಸಾವಿರ ರೂ.ಲಂಚಸ್ವೀಕರಿಸುತ್ತಿದ್ದಾಗ ಚಂದ್ರೇಶ್ ನನ್ನು ವಶಕ್ಕೆಪಡೆದಿದ್ದಾರೆ.
ಲಂಚದ ಹಣದಿಂದ ಬೆಂಗಳೂರಿನ ನಾಗರಬಾವಿಯಲ್ಲಿ ಸುಮಾರು ಮೂರು ಕೋಟಿ ರೂ. ಮೌಲ್ಯದ ಬಂಗಲೆಯನ್ನು ಬೇನಾಮಿ ಹೆಸರಿನಲ್ಲಿ ನಿರ್ಮಿಸಿ ಬಾಡಿಗೆಗೆ ಬಿಟ್ಟಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಜತೆಗೆ ಬೆಂಗಳೂರಿನಲ್ಲಿ ಮತ್ತೊಂದು ಕಡೆ ಸುಮಾರು ಒಂದು ಕೋಟಿ ರೂ. ಮೌಲ್ಯದ ಮನೆ ನಿರ್ಮಿಸಿರುವುದಾಗಿ ತಿಳಿದು ಬಂದಿದೆ.
ಇದಿಷ್ಟೇ ಅಲ್ಲದೇ ತಿ.ನರಸೀಪುರ ತಾಲೂಕಿನ ಬೀಡನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಆಗಿದ್ದಾಗ ಹಲವಾರು ಅಕ್ರಮಗಳನ್ನು ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಎಲ್ಲಾ ವಿಧದಲ್ಲೂ ಅಧಿಕಾರಿಗಳು ತನಿಖೆಗೆ ಒಳಪಡಿಸಿದರೆ. ಪಿಡಿಒ ಮಾಡಿರುವ ಅಕ್ರಮ ಮತ್ತು ಬೇನಾಮಿ ಆಸ್ತಿಯ ಬಗ್ಗೆ ಬಹಿರಂಗವಾಗಲಿದೆ ಎಂದು ವಿಜಯಪಥಕ್ಕೆ ಪಿಡಿಒ ಚಂದ್ರೇಶ್ ಅವರನ್ನು ಹತ್ತಿರದಿಂದ ಬಲ್ಲ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.