NEWSನಮ್ಮಜಿಲ್ಲೆಬೆಂಗಳೂರು

ರಾಜಧಾನಿಯಲ್ಲಿ ಬಳಕೆ ಮಾಡುತ್ತಿಲ್ಲದ ಜಾಗಗಳಿಗೆ ಮರುಜೀವ ನೀಡಲು ಕೈಜೋಡಿಸಿ: ಮುಖ್ಯ ಆಯುಕ್ತ ಮಹೇಶ್ವರ್ ರಾವ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಗರದಲ್ಲಿ ಬಳಕೆಯಲ್ಲಿಲ್ಲದ ಜಾಗಗಳಿಗೆ ಮರುಜೀವ ನೀಡುವ ಉದ್ದೇಶದಿಂದ ಜಿಬಿಎ ಜೊತೆ ಕೈಜೋಡಿಸಲು ನಾಗರಿಕರಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಮನವಿ ಮಾಡಿದರು.

ಜಿಬಿಎ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳ ಪುನರುಜ್ಜೀವನಕ್ಕಾಗಿ ನಾಗರಿಕರಿಗೆ ಮುಕ್ತ ಅವಕಾಶ (ಓಪನ್ ಹೌಸ್) ಕಲ್ಪಿಸುವ ಉದ್ದೇಶದಿಂದ ಸರ್ ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್) ನಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದಲ್ಲಿ ಬಳಕೆಯಲ್ಲಿರದ ಅನೇಕ ಜಾಗಗಳಿವೆ. ಇಂತಹ ಜಾಗಗಳನ್ನು ಗುರುತಿಸಿ, ಸರ್ಕಾರ, ಸಿಎಸ್ಆರ್, ಎನ್.ಜಿ.ಓ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಅವುಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಬೇಕಿದೆ. ನಂತರ ಸ್ಥಳೀಯರೊಂದಿಗೆ ಸೇರಿ ಆ ಜಾಗಗಳನ್ನು ಆಕರ್ಷಕ ಸಾರ್ವಜನಿಕ ಸ್ಥಳಗಳಾಗಿ ಪರಿವರ್ತಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ ನಗರದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ಅದರ ಭಾಗವಾಗಿ ಈಗಾಗಲೇ ‘ಸುರಕ್ಷಾ–75’ ಅಡಿ ಜಂಕ್ಷನ್ ಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದೀಗ ಬಯಸಿದಂತೆ ಬಯಲು ಉಪಕ್ರಮದಡಿ ಬಳಕೆಯಲ್ಲಿಲ್ಲದ ಸ್ಥಳಗಳಿಗೆ ಪುನರುಜ್ಜೀವನ ನೀಡುವ ಕೆಲಸ ನಡೆಯುತ್ತಿದ್ದು, ಇದರಿಂದ ಸ್ಥಳೀಯರು ಆ ಸ್ಥಳಗಳಿಗೆ ಭೇಟಿ ನೀಡಿ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಕಾರ್ಯ ಕೈಗೊಳ್ಳಬೇಕು. ನಾಗರಿಕರು ಸ್ವಂತ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆ ಹಾಗೂ ಪಾದಚಾರಿ ಮಾರ್ಗಗಳನ್ನು ಹೆಚ್ಚಾಗಿ ಬಳಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಅವರು ಅಭಿಪ್ರಾಯಪಟ್ಟರು.

ಸ್ಥಳೀಯವಾಗಿ ಬಳಕೆಯಲ್ಲಿಲ್ಲದ ಜಾಗಗಳನ್ನು ಅಭಿವೃದ್ಧಿಪಡಿಸುವಾಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಮಹಿಳೆಯರು ಸ್ವತಂತ್ರವಾಗಿ ಮತ್ತು ಸುರಕ್ಷಿತವಾಗಿ ಓಡಾಡುವ ವಾತಾವರಣ ನಿರ್ಮಿಸಬೇಕೆಂದು ತಿಳಿಸಿದರು.

ಐದು ನಗರ ಪಾಲಿಕೆಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ನಡೆಸಿ ನಾಗರಿಕರು, ಸ್ಟಾರ್ಟ್ಅಪ್ ಗಳು ಹಾಗೂ ಸಂಸ್ಥೆಗಳಿಂದ ಸಲಹೆಗಳನ್ನು ಆಹ್ವಾನಿಸಬೇಕು. ನಗರಾಭಿವೃದ್ಧಿಗೆ ಉಪಯುಕ್ತ ಮಾದರಿಗಳ ಜಾರಿಗೆ ಕಾರ್ಪೋರೇಟ್–ಸಿಎಸ್ಆರ್ ಸಹಭಾಗಿತ್ವ ಮತ್ತು ಪ್ರಾಯೋಗಿಕ ಯೋಜನೆಗಳಿಗೆ ಅವಕಾಶ ಕಲ್ಪಿಸಿ, ಬಳಸದೆ ಇರುವ ಸಾರ್ವಜನಿಕ ಸ್ಥಳಗಳನ್ನು ಸುರಕ್ಷಿತ ಹಾಗೂ ನಾಗರಿಕ ಸ್ನೇಹಿ ಸಮುದಾಯ ಸ್ಥಳಗಳಾಗಿ ಪರಿವರ್ತಿಸಬೇಕು. ಸಮೂಹ ಸಹಕಾರ ಮತ್ತು ಜನಪಾಲ್ಗೊಳ್ಳುವಿಕೆಯ ಮೂಲಕ ಉತ್ತಮ ಮತ್ತು ವಾಸಯೋಗ್ಯ ನಗರವನ್ನು ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.

ಪ್ರಧಾನ ಅಭಿಯಂತರರಾದ ಡಾ. ಬಿ.ಎಸ್. ಪ್ರಹ್ಲಾದ್ ಅವರು ಮಾತನಾಡಿ, ಜಿಬಿಎ (ಹಿಂದಿನ ಬಿಬಿಎಂಪಿ) ಸದಾ ಸಾರ್ವಜನಿಕ–ಖಾಸಗಿ ಸಹಭಾಗಿತ್ವ (PPP) ಕಾರ್ಯಕ್ರಮಗಳನ್ನು ಉತ್ತೇಜಿಸುತ್ತಿದ್ದು, ಈ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರವು ಇಂತಹ ಯೋಜನೆಗಳನ್ನು ವೇಗವಾಗಿ ಅನುಷ್ಠಾನಗೊಳಿಸಲು ‘ಪಿಪಿಪಿ ಸೆಲ್’ ಅನ್ನು ಸ್ಥಾಪಿಸಿದೆ ಎಂದು ತಿಳಿಸಿದರು.

ಇಂದಿನ ಕಾರ್ಯಕ್ರಮದ ಉದ್ದೇಶವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಕಾರ್ಪೊರೇಟ್ ಸಂಸ್ಥೆಗಳನ್ನು ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದಾಗಿದೆ. ನಗರದಲ್ಲಿ ಈಗಾಗಲೇ ಅನೇಕ ಕಡೆ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅದೇ ಮಾದರಿಯಲ್ಲಿ ಇನ್ನಷ್ಟು ಸ್ಥಳಗಳಲ್ಲಿ ಪಿಪಿಪಿ ಅಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಜೊತೆಗೆ ಸಿ.ಎಸ್.ಆರ್ ಅನುದಾನವನ್ನು ಬಳಸಿಕೊಂಡು ಬಳಕೆಯಲ್ಲಿಲ್ಲದ ಸ್ಥಳಗಳಿಗೆ ಹೊಸ ರೂಪ ನೀಡುವ ಕೆಲಸ ಮಾಡಬೇಕೆಂದು ಹೇಳಿದರು.

ಜನಕೇಂದ್ರಿತ ಸಾರ್ವಜನಿಕ ಸ್ಥಳಗಳಾಗಿ ಮರುಕಲ್ಪನೆ: ಜಿಬಿಎ, ಸೆನ್ಸಿಂಗ್ ಲೋಕಲ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಡಿಸೈನರ್ಸ್ ಇಂಡಿಯಾ – ಕರ್ನಾಟಕ ಅಧ್ಯಾಯದ ಸಹಯೋಗದಲ್ಲಿ, 2025ರ ಮೇ ತಿಂಗಳಲ್ಲಿ “ಬಯಸಿದಂತೆ ಬಯಲು” ಯೋಜನೆಯಡಿ “ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳ ಪುನರುಜ್ಜೀವನ” ಎಂಬ ವಿಶಿಷ್ಟ ನಗರಮಟ್ಟದ ಉಪಕ್ರಮವನ್ನು ಆರಂಭಿಸಲಾಗಿದೆ.

ಈ ಯೋಜನೆಯ ಉದ್ದೇಶವು, ಬೆಂಗಳೂರಿನ ರಸ್ತೆ ಹಾಗೂ ಬೀದಿಗಳ ಮೂಲಸೌಕರ್ಯವನ್ನು ಕೇವಲ ವಾಹನ ಸಂಚಾರದ ಮಾರ್ಗಗಳಾಗಿ ಮಾತ್ರವಲ್ಲದೆ, ವಿವಿಧ ಸಮುದಾಯಗಳ ಅಗತ್ಯಗಳನ್ನು ಪೂರೈಸುವಂತೆ ಎಲ್ಲರನ್ನು ಒಳಗೊಂಡ ಜನಕೇಂದ್ರಿತ ಸಾರ್ವಜನಿಕ ಸ್ಥಳಗಳಾಗಿ ಮರುಕಲ್ಪನೆ ಮಾಡುವುದಾಗಿದೆ.

194 ಸ್ಥಳಗಳ ಪುನರುಜ್ಜೀವನಕ್ಕೆ ಕ್ರಮ: ಬಯಸಿದಂತೆ ಬಯಲು ಉಪಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸ್ಥಳೀಯ ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ನಗರ ವಿನ್ಯಾಸಕಾರರು, ವಾಸ್ತು ಶಿಲ್ಪಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು 250ಕ್ಕೂ ಅಧಿಕ ಸ್ಥಳಗಳನ್ನು ಗುರುತಿಸಿದ್ದಾರೆ.
ಪ್ರಾಥಮಿಕ ಪರಿಶೀಲನೆಯ ನಂತರ 194 ಸ್ಥಳಗಳನ್ನು ಕಾರ್ಯಗತಗೊಳಿಸಬಹುದಾದ ಸ್ಥಳಗಳೆಂದು ಗುರುತಿಸಿ, ನಗರಮಟ್ಟದ ಸಾರ್ವಜನಿಕ ಸಂಗ್ರಹದಲ್ಲಿ ಸೇರಿಸಲಾಗಿದೆ. ಈ ಸ್ಥಳಗಳನ್ನು 05 ನಗರ ಪಾಲಿಕೆಗಳ ಮೂಲಕ ಹಂತ ಹಂತವಾಗಿ ಜಾರಿಗೊಳಿಸುವ ಯೋಜನೆ ರೂಪಿಸಲಾಗಿದೆ. ಅದರ ವಿವರಗಳನ್ನು ಈ ಲಿಂಕ್ ನಲ್ಲಿ ವೀಕ್ಷಿಸಬಹುದು:
( https://www.blrpublicspace-revival.in/repository )

ಪಾಲಿಕೆವಾರು ಗುರುತಿಸಲಾದ ಸ್ಥಳಗಳ ವಿವರ:
* ಬೆಂಗಳೂರು ಕೇಂದ್ರ – 43 ಸ್ಥಳಗಳು
* ಬೆಂಗಳೂರು ಉತ್ತರ – 49 ಸ್ಥಳಗಳು
* ಬೆಂಗಳೂರು ಪೂರ್ವ – 21 ಸ್ಥಳಗಳು
* ಬೆಂಗಳೂರು ಪಶ್ಚಿಮ – 31 ಸ್ಥಳಗಳು
* ಬೆಂಗಳೂರು ದಕ್ಷಿಣ – 50 ಸ್ಥಳಗಳು

ಎನ್ ಕ್ಯಾಪ್ ಅಡಿ 25 ಸ್ಥಳಗಳಿಗೆ ಹಣಕಾಸು ಅನುಮೋದನೆ: ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮ (NCAP) ಅಡಿಯಲ್ಲಿ 25 ಸ್ಥಳಗಳಿಗೆ ಹಣಕಾಸು ಅನುಮೋದನೆ ನೀಡಲಾಗಿದೆ. ನೆರೆಹೊರೆಯ ಸಾರ್ವಜನಿಕ ಸ್ಥಳಗಳ ಸುಧಾರಣೆಗೆ ನಾಗರಿಕರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಜೊತೆಗೆ, ಈ ಉಪಕ್ರಮವನ್ನು ಇನ್ನಷ್ಟು ವಿಸ್ತರಿಸುವ ಬದ್ಧತೆಯನ್ನು ಜಿಬಿಎ ಹೊಂದಿದೆ.

ಪ್ಯಾನಲ್ ಚರ್ಚೆ: ‘ಸಹಯೋಗಿ ನಿಧಿ’ (Collaborative Financing) ವಿಷಯದ ಕುರಿತು ನಡೆದ ಪ್ಯಾನಲ್ ಚರ್ಚೆಯಲ್ಲಿ ಸಾರ್ವಜನಿಕ ನಿಧಿಗಳಿಗೆ ಪೂರಕವಾಗಿ ಸಿಎಸ್ಆರ್ ಹಾಗೂ ಲೋಕೋಪಕಾರಿ ಬಂಡವಾಳವನ್ನು ಜೋಡಿಸುವ ಕುರಿತು ಮಹತ್ವದ ಸಲಹೆಗಳನ್ನು ನೀಡಿದರು.

ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಲೋಕೇಶ್, ರವಿ, ಕೃಷ್ಣಮೂರ್ತಿ, ವಿಶ್ವನಾಥ್, ಯಮುನಾ, ಸ್ವಯಂಪ್ರಭಾ, ಹೇಮಲತಾ, ನಾಗರಿಕರು, ಹಣಕಾಸು ಒದಗಿಸುವ ಸಂಸ್ಥೆಗಳು, ಎನ್.ಜಿ.ಓ ಗಳು, ಸಿ.ಎಸ್.ಆರ್ ಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಇದ್ದರು.

Megha
the authorMegha

Leave a Reply

error: Content is protected !!