ಕೋಲ್ಕತಾ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಹಿಂದೂ ವಿರೋಧಿ ಮನೋಧರ್ಮ ಹೊಂದಿದ್ದು, ಇದರಿಂದ ರಾಜ್ಯವನ್ನು ಅಭಿವೃದ್ಧಿ ವಿಚಾರದಲ್ಲಿ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.
ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಗೈದಿರುವ ಬಿಜೆಪಿ ಕಳೆದ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಶಂಕು ಸ್ಥಾಪನೆ ದಿನ ಕೋವಿಡ್ ಲಾಕ್ ಡೌನ್ ಘೋಷಿಸಿದರು. ಸ್ಥಳೀಯ ಜನರು ಮಹತ್ವದ ಕಾರ್ಯದಲ್ಲಿ ಭಾಗವಹಿಸುವುದು ಬೇಡ ಎನ್ನುವುದು ಮಮತಾ ಬ್ಯಾನರ್ಜಿ ಲಾಕ್ ಡೌನ್ ಹೇರಿಕೆಯ ಉದ್ದೇಶವಾಗಿತ್ತು, ಅದೇ ಜುಲೈ 31ರಂದು ಈದ್ ಮಿಲಾದ್ ಸಂದರ್ಭದಲ್ಲಿ ನಿರ್ಬಂಧ ಸಡಿಲಿಸಿದ್ದರು ಎಂದು ಕಿಡಿಕಾರಿದ್ದಾರೆ.
ಇದನ್ನು ನೋಡಿದಾಗ ರಾಜ್ಯ ಸರ್ಕಾರದ ನೀತಿ, ನಿಯಮಗಳು ಹಿಂದೂ ವಿರೋಧಿ ಮನೋಧರ್ಮವನ್ನು ಹೊಂದಿದೆ, ಅಲ್ಪಸಂಖ್ಯಾತರನ್ನು ಓಲೈಸಲು ಹೊಂದಾಣಿಕೆ ಸೂತ್ರ ಅನುಸರಿಸುತ್ತಿದ್ದಾರೆ. ಜನರಿಗೆ ಇದು ಗೊತ್ತಾಗಬೇಕು. ರಾಜ್ಯದಲ್ಲಿ ಬಿಜೆಪಿಯ ಮತ ಶೇಕಡಾವಾರು ಹೆಚ್ಚಾಗುತ್ತಿದ್ದು ಮುಂದಿನ ವರ್ಷ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಬೇಕು ಎಂದರು.
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆ ಜನತೆಗೆ ಸಿಗುವುದಕ್ಕೆ ಮಮತಾ ಬ್ಯಾನರ್ಜಿಯವರು ತಡೆಯೊಡ್ಡಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪಡೆಯುವುದಕ್ಕೂ ಸಹ ರಾಜ್ಯದ ರೈತರನ್ನು ತಡೆಯುತ್ತಿದ್ದಾರೆ, ಅರ್ಹ ಫಲಾನುಭವಿಗಳ ರೈತರ ಪಟ್ಟಿಯನ್ನು ಇನ್ನೂ ಪಶ್ಚಿಮ ಬಂಗಾಳ ಸರ್ಕಾರ ನೀಡಿಲ್ಲ ಎಂದು ದೂರಿದ್ದಾರೆ.
ರಾಜ್ಯವನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವಲ್ಲಿ ಮಮತಾ ಸರ್ಕಾರ ವಿಫಲವಾಗಿದೆ. ಬಂಗಾಳ ಜನತೆಯನ್ನು ಕಾಪಾಡುತ್ತಿರುವುದು ಮಮತಾ ಅಲ್ಲ, ಮೋದಿ, ಜನ ವಿರೋಧಿ ಮಮತಾ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಹೇಳಿದರು.