ಬಾದಾಮಿ: ಒಂದು ದೇಶ ಮತ್ತೊಂದು ದೇಶದ ಬಗ್ಗೆ ಗೂಢಾಚಾರಿಕೆ ಮಾಡುವುದೇ ತಪ್ಪು ಎಂದು ಚೀನಾ ಬೇಹುಗಾರಿಕೆ ಪಟ್ಟಿಯಲ್ಲಿ ತಮ್ಮ ಹೆಸರು ಕೇಳಿಬಂದಿರುವ ವಿಚಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸೋಮವಾರದಿಂದ ತಮ್ಮ ವಿಧಾನಸಭಾ ಕ್ಷೇತ್ರ ಬಾದಾಮಿಯಲ್ಲಿ ಪ್ರವಾಸ ಕೈಗೊಂಡಿರುವ ಅವರು, ಎರಡನೇ ದಿನವಾದ ಮಂಗಳವಾರ ಕೂಡ ಪ್ರವಾಸ ಮುಂದುವರಿಸಿದ್ದು, ಪಟ್ಟಣದಲ್ಲಿ ಕುಡಿಯುವ ನೀರು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಚೀನಾ ಬೇಹುಗಾರಿಕೆ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ ಹೆಸರು ಕೇಳಿಬಂದಿದೆ. ಚೀನಾ ಬೇಹುಗಾರಿಕೆ ಪಟ್ಟಿಯಲ್ಲಿ ನನ್ನ ಹೆಸರು ಕೇಳಿ ಬಂದಿದೆ. ವಿದೇಶಿ ಬೇಹುಗಾರಿಕೆಯನ್ನು ಕೇಂದ್ರ ಸರ್ಕಾರ ಹತ್ತಿಕ್ಕಬೇಕು. ಅಂತವರನ್ನು ಪತ್ತೆ ಹಚ್ಚಿ ಬಲಿಹಾಕಬೇಕು ಎಂದು ಒತ್ತಾಯಿಸಿದರು.
ಶಿರಾ ಬೈ ಎಲೆಕ್ಷನ್ ವಿಚಾರದ ಬಗ್ಗೆ ನಾವಿನ್ನೂ ಚರ್ಚೆ ಮಾಡಿಲ್ಲ, ನಾಳೆ ಈ ಕುರಿತು ಸಭೆ ಕರೆದಿದ್ದೇವೆ. ಸಭೆಯಲ್ಲಿ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗಳ್ಳುತ್ತೇವೆ ಎಂದು ಶಿರಾ ಉಪಚುನಾವಣೆಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡುವ ಕುರಿತ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು.
ಇದಕ್ಕೂ ಮುನ್ನ ಅಧಿಕಾರಿಗಳ ಜತೆ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಕುರಿತು ಚರ್ಚಿಸಿದರು ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.