ನ್ಯೂಡೆಲ್ಲಿ: ಸುದರ್ಶನ್ ಟಿವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗೆ ಹೇಳಿಕೆ ಸಲ್ಲಿಕೆ ಮಾಡಿರುವ ಕೇಂದ್ರ ಸರ್ಕಾರ, ಡಿಜಿಟಲ್ ಮಾಧ್ಯಮಗಳಿಗೆ ಮೊದಲು ನಿರ್ಬಂಧ ವಿಧಿಸಿ ಬಳಿಕ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೇಲೆ ಕ್ರಮ ಜರುಗಿಸಿ ಎಂದು ಹೇಳಿದೆ.
ಸುದರ್ಶನ್ ಟಿವಿಯ ‘ಬಿಂದಾಸ್ ಬೋಲ್’ ಕಾರ್ಯಕ್ರಮದ ಬಗ್ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದು, ‘ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಈಗಾಗಲೇ ಸಾಕಷ್ಟು ನೀತಿ ನಿಯಮಗಳ ಚೌಕಟ್ಟುಗಳಿವೆ. ಸುಪ್ರೀಂ ಕೋರ್ಟ್ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವಂತಹ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ, ತ್ವರಿತಿಗತಿಯಲ್ಲಿ ಮಾಹಿತಿ ಹಂಚುವ ಡಿಜಿಟಲ್ ಮಾಧ್ಯಮಗಳಿಗೆ ಮೊದಲು ನಿರ್ಬಂಧ ವಿಧಿಸಬೇಕಿದೆ ಎಂದು ಹೇಳಿದೆ.
‘ಡಿಜಿಟಲ್ ಮಾಧ್ಯಮಗಳು ವೇಗವಾಗಿ ವಿಶ್ವದ ಮೂಲೆ ಮೂಲೆಗೂ ಮಾಹಿತಿ ತಲುಪಿಸುವ ಪ್ರಕ್ರಿಯೆಯಿಂದ ಉಂಟಾಗಿರುವ ಗಂಭೀರ ಪರಿಣಾಮಗಳನ್ನು ಪರಿಗಣಿಸಿ, ಆದ್ಯತೆ ಮೇರೆಗೆ ಡಿಜಿಟಲ್ ಮಾಧ್ಯಮಗಳಿಗೆ ನಿಯಂತ್ರಣ ವಿಧಿಸಬಹುದು. ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಒಂದು ಬಾರಿ ಮಾತ್ರ ಸುದ್ದಿಗಳು ಮುದ್ರಿತ ಅಥವಾ ಪ್ರಸಾರವಾಗುತ್ತವೆ.
ಆದರೆ ಡಿಜಿಟಲ್ ಮಾಧ್ಯಮಗಳಲ್ಲಿ ಮಾಹಿತಿ ತ್ವರಿತಗತಿಯಾಗಿ ತಲುಪುವ ಜತೆಗೆ, ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಬಹುದೊಡ್ಡ ವೀಕ್ಷಕ/ ಓದುಗ ವರ್ಗವನ್ನು ತಲುಪತ್ತದೆ ಎಂದು ಸಚಿವಾಲಯ ತನ್ನ ಅಫಿಡವಿಟ್‌ನಲ್ಲಿ ವಿವರಿಸಿದೆ.
ಪ್ರಸ್ತುತ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಸಾಕಷ್ಟು ಕಾನೂನು ಮತ್ತು ನಿಬಂಧನೆಗಳ ಚೌಕಟ್ಟುಗಳಿವೆ. ಆದರೆ, ವಾಟ್ಸ್‌ಆ್ಯಪ್, ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ತ್ವರಿತಗತಿಯಲ್ಲಿ ಮಾಹಿತಿ ಹಂಚುವ ಡಿಜಿಟಲ್ ಮಾಧ್ಯಮಗಳಿಗೆ ನಿಯಂತ್ರಣ ವಿಧಿಸುವ ಅಗತ್ಯವಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಚಾರ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.