ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ವಿದ್ಯುತ್ ಉಳಿತಾಯ ಮಾಡುವ ಉದ್ದೇಶದಿಂದ ಈಗಾಗಲೇ ಚಾಲ್ತಿಯಲ್ಲಿರುವ ಬೀದಿ ದೀಪಗಳನ್ನು ತೆರವುಗೊಳಿಸಿ Energy Efficient LED ಬೀದಿ ದೀಪಗಳನ್ನು ಅಳವಡಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ.

ಸರ್ಕಾರದ ಅನುಮೋದನೆ ಪಡೆದ ನಂತರ ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್ (PPP) ಮಾದರಿಯಲ್ಲಿ ಕಾರ್ಯನಿರ್ವಹಿಸಲು ವಿದ್ಯುತ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಿಂದ ಟೆಂಡರ್ ಆಹ್ವಾನಿಸಿ, ಕಾರ್ಯಾದೇಶಗಳನ್ನು ನೀಡಲಾಗಿದೆ.
ಈ ಯೋಜನೆಯ ಕಾರ್ಯಗತಗೊಳಿಸುವ ಕೆಲಸವನ್ನು ಪ್ರಸ್ತುತ ವಿದ್ಯುತ್ ವಿಭಾಗದ ಮೂಲಕ ಎಲ್ಲ ವಾರ್ಡ್‌ಗಳಲ್ಲಿ ಕೈಗೊಳ್ಳಲಾಗುತ್ತಿದೆ. ಇದಲ್ಲದೆ, ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ 3 ವಾರ್ಡ್‌ಗಳು ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 5 ಹೊಸ ವಾರ್ಡ್‌ಗಳು (ಹಿಂದಿನ 4 ವಾರ್ಡ್‌ಗಳು) ಸೇರಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,24,591 ಬೀದಿ ದೀಪಗಳು ಇದ್ದು, ಅದರಲ್ಲಿ 64,898 ಎಲ್ ಇಡಿ ಅಲ್ಲದ ಬೀದಿ ದೀಪಗಳು ಹಾಗೂ 59,693 ಎಲ್‌ಇಡಿ ಬೀದಿ ದೀಪಗಳು ಸೇರಿವೆ.
ಈಗಾಗಲೇ ಚಾಲ್ತಿಯಲ್ಲಿರುವ ದೀಪಗಳನ್ನು Energy Efficient LED ದೀಪಗಳಾಗಿ ಬದಲಾಯಿಸುವ ಕಾರ್ಯದಲ್ಲಿ ಈಗಾಗಲೇ 37,257 ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಸುಮಾರು ಶೇ.55ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸಗಳು ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಸಂಪೂರ್ಣಗೊಳಿಸಲಾಗುವುದು.
ಈ ಯೋಜನೆಯ ಮೂಲಕ ವಿದ್ಯುತ್ ಬಳಕೆ ಕಡಿಮೆಯಾಗುವ ಜತೆಗೆ ನಗರದಲ್ಲಿ ಉತ್ತಮ ಬೀದಿ ಬೆಳಕು ಒದಗಿಸುವುದಕ್ಕೂ ಸಹಕಾರಿಯಾಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
Related










