ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಮ್ಮ ಪ್ರತಿಷ್ಟೆಯ ಹಾಗೂ ಪ್ರಚಾರದ ಹಪಾಹಪಿಗೆ ಬಿದ್ದು ವಠಾರ ಶಾಲೆ, ವಿದ್ಯಾ ಗಮ ಎನ್ನುವಂತಹ ಹುಚ್ಚು ಹುಚ್ಚು ಯೋಜನೆಗಳ ಮೂಲಕ ನಾನಾ ರೀತಿಯ ಪ್ರಯೋಗಗಳನ್ನು ಮಾಡಲು ಹೋಗಿ ರಾಜ್ಯದ ಲಕ್ಷಾಂತರ ಮಕ್ಕಳ ಹಾಗೂ ಶಿಕ್ಷಕರ ಜೀವಕ್ಕೆ ಸಂಚಕಾರ ತರುತ್ತಿದ್ದಾರೆ. ಇದನ್ನು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾದ್ಯಮ ಸಂಚಾಲಕ ಜಗದೀಶ್ ವಿ ಸದಂ ಟೀಕಿಸಿದ್ದಾರೆ.
ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ, ದೌರ್ಜನ್ಯ ಕೌಟುಂಬಿಕ ಹಿಂಸೆ, ಮಕ್ಕಳ ಕಳ್ಳ ಸಾಗಾಣಿಕೆಯಂತಹ ಪ್ರಕರಣಗಳು ಶಾಲೆ ತೆರೆಯದ ಕಾರಣ ಹೆಚ್ಚುತ್ತಿದ್ದು ಇದನ್ನು ತಡೆಗಟ್ಟುವ ಸಲುವಾಗಿ ವಿದ್ಯಾಗಮ, ವಠಾರ ಶಾಲೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸುಳ್ಳು ಹೇಳುತ್ತಿರುವ ಸುರೇಶ್ ಕುಮಾರ್ ಇಡೀ ರಾಜ್ಯದ ಒಂದು ಕೋಟಿ ಶಾಲಾ ಮಕ್ಕಳ ಮಹಾನ್ ಪೋಷಕ ಎನ್ನುವಂತೆ ಪ್ರದರ್ಶನ ಮಾಡಿಕೊಳ್ಳುತ್ತಿದ್ದಾರೆ ಹೊರತು ಮಕ್ಕಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಅವರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವುದು ಖೇದನೀಯ.
ಮಕ್ಕಳ ಮೇಲೆ ಇಷ್ಟೊಂದು ದಬ್ಬಾಳಿಕೆ ಆಗುತ್ತಿದೆ ಎಂದಾದರೆ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದಾಯಿತು. ಇಂತಹ ಪ್ರಕರಣಗಳು ಹೆಚ್ಚಾಗಿರುವ ಕುರಿತು ಗೃಹ ಇಲಾಖೆಯಲ್ಲಿ ಏನಾದರೂ ಅಂಕಿ ಅಂಶಗಳು ಅಥವಾ ದಾಖಲೆಗಳು ಇವೆಯೇ ಎಂದು ತಿಳಿಸಬೇಕು. ತಪ್ಪಿತಸ್ಥರಿಗೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂಬುದು ರಾಜ್ಯದ ಜನತೆಗೆ ತಿಳಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಈ ರಾಜ್ಯ ಕಂಡ ಅತ್ಯುತ್ತಮ ಶಿಕ್ಷಣ ಸಚಿವ ಗೋವಿಂದೇ ಗೌಡ ಅವರನ್ನು ತಪ್ಪು, ತಪ್ಪಾಗಿ ಅನುಕರಿಸಲು ಹೋಗುವುದು ಅಥವಾ ಭವಿಷ್ಯದಲ್ಲಿ ಅವರನ್ನು ಮೀರಿಸುವಂತಹ ಉತ್ತಮ ಶಿಕ್ಷಣ ಸಚಿವ ನಾನಾಗಬೇಕೆಂಬ ಹಪಾಹಪಿಯಿಂದ ಇಂತಹ ಕುಕೃತ್ಯಗಳಿಗೆ ಕೈ ಹಾಕಬೇಡಿ. ಮಕ್ಕಳ ಕೊಲೆಗಡುಕ ಎಂಬ ಪಟ್ಟವನ್ನು ಕಟ್ಟಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ಆರ್ಥಿಕ ಮುಗ್ಗಟ್ಟಿನಿಂದ, ಸೋಂಕಿಗೆ ಹೆದರಿ ಈ ಬಾರಿ ಮುಕ್ಕಾಲು ಭಾಗ ಆರ್‌ಟಿಇ ಸೀಟುಗಳೇ ಭರ್ತಿ ಆಗಿಲ್ಲ, ಶೇ 90ರಷ್ಟು ಪೋಷಕರು ಶಾಲೆ ತೆರೆಯುವುದು ಬೇಡ ಎಂದು ಅಭಿಪ್ರಾಯ ಪಟ್ಟಿದ್ದಾರೆ ಆದರೂ ಕೂಡ ಪರೋಕ್ಷವಾಗಿ ವಿದ್ಯಾಗಮ, ವಠಾರ ಶಾಲೆ ಎಂದು ಕೊಂಡು ಮಕ್ಕಳ ಹಾಗೂ ಶಿಕ್ಷಕರ ಜೀವಕ್ಕೆ ಏಕೆ ಅಪಾಯ ತರುತ್ತಿರುವಿರೀ ಸುರೇಶ್ ಕುಮಾರ್ ಅವರೇ?
ಮುಗ್ದ ಜೀವಗಳನ್ನು ಬಲಿ ಪಡೆಯುವ ಕೆಲಸಕ್ಕೆ ಕೈ ಹಾಕದೇ ಪರ್ಯಾಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಯೋಚಿಸಲು ಇದು ಸಕಾಲ. ಈ ಬಗ್ಗೆ ಎಲ್ಲ ರಂಗಗಳ ತಜ್ಞರ ನೇತೃತ್ವದಲ್ಲಿ ಸಮಿತಿ ರಚಿಸಿ ಮುಂದಿನ ಕ್ರಮ ಕೈಗೊಳ್ಳ ಬೇಕು ಹಾಗೂ ವಿದ್ಯಾಗಮ, ವಠಾರ ಶಾಲೆ ಯೋಜನೆಗಳನ್ನು ತತ್‌ಕ್ಷಣದಿಂದ ರದ್ದುಗೊಳಿಸಬೇಕು ಎಂದು ಸದಂ ಆಗ್ರಹಿಸಿದ್ದಾರೆ.