ಬೆಂಗಳೂರು: ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಮತ್ತು ಸೋಮವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾಗ ಕುಸಿತದಿಂದಾಗಿ ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚು ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಮತ್ತು ಇತರ ಜಿಲ್ಲೆಗಳಲ್ಲಿ ಎರಡು ದಿನ ಮಳೆಯ ಮುನ್ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಶನಿವಾರ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಕಡಕೋಳ ಗ್ರಾಮದಲ್ಲಿ ದಂಪತಿ ಹಾಗೂ ಮಗಳಿಗೆ ಸಿಡಿಲು ಬಡಿದಿದ್ದು, ತಾಯಿ ಮತ್ತು ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಮಳೆ ಬಂದಾಗ ಮರದಡಿ ನಿಂತಿದ್ದರು. ಮೊಳಕಾಲ್ಮೂರು ತಾಲೂಕಿನಲ್ಲಿ ವ್ಯಕ್ತಿಯೊಬ್ಬ ಸಿಡಿಲಿನಿಂದ ಮೃತಪಟ್ಟಿದ್ದಾರೆ.
ಮೈಸೂರು, ಮಂಡ್ಯ, ದಾವಣಗೆರೆ ಜಿಲ್ಲೆಯಲ್ಲಿಯೂ ಭಾರಿ ಮಳೆಯಾಗಿದ್ದು, ಭತ್ತದ ಗದ್ದೆಗಳು ಜಲಾವೃತವಾಗಿವೆ. ಧಾರವಾಡ ಜಿಲ್ಲೆಯ ನವಲಗುಂದದಲ್ಲಿ 130 ಮಿ. ಮೀ. ಮಳೆಯಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ ಒಂದೇ ದಿನ ದಾಖಲೆಯ 14 ಸೆಂ. ಮೀ. ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಭಾನವಾರ ಬೆಳಗ್ಗೆಯೂ ಮೋಡ ಕವಿದ ವಾತಾವರಣವಿದ್ದು ತುಂತುತು ಮಳೆಯಾಗುತ್ತಿದೆ. ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟುವಿನಲ್ಲಿ ಅತಿ ಹೆಚ್ಚು ಎಂದರೆ 148 ಮಿ. ಮೀ. ಮಳೆಯಾಗಿದೆ. 2018ರಲ್ಲಿ 18 ಸೆಂ. ಮೀ. ಮಳೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಮತ್ತು ಸೋಮವಾರ ಕರಾವಳಿ ಭಾಗದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಶನಿವಾರ ಸಂಜೆ 7.30ರ ಬಳಿಕ ಭಾರಿ ಮಳೆಯಾಗಿದೆ. ಇಂದು ಸಹ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಭಾನುವಾರ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಮಳೆ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರುವಂತೆ ಸರ್ಕಾರ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.