ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನಡುವಿನ ವಿವಾದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ನಡೆದ ಮುಖಾಮುಖಿಯಿಂದ ತಾತ್ಕಾಲಿಕ ತೆರೆ ಬಿದ್ದಂತ್ತಾಗಿದೆ.
ಮಂಗಳವಾರ ತಮ್ಮನ್ನು ಭೇಟಿಯಾದ ಸಚಿವರ ಜತೆ ಮುಖ್ಯಮಂತ್ರಿಗಳು ಸಮಾಲೋಚನೆ ಮಾಡಿ ಬಿಕ್ಕಟ್ಟು ನಿವಾರಿಸುವ ಪ್ರಯತ್ನ ಮಾಡಿದರು. ಉಪ ಚುನಾವಣೆ ಸಂದರ್ಭದಲ್ಲಿ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಉಂಟು ಮಾಡುವುದು ಸರಿಯಲ್ಲ. ಒಟ್ಟಿಗೆ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಈ ಇಬ್ಬರೂ ಸಚಿವರು ಪರಸ್ಪರ ಸೌಹಾರ್ದಯುತವಾಗಿ ಮುಖ್ಯಮಂತ್ರಿ ಅವರ ಜತೆ ಸಮಾಲೋಚನೆ ನಡೆಸಿದರು ಎಂದು ತಿಳಿದುಬಂದಿದೆ.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಶ್ರೀರಾಮುಲು, ಈ ಹಿಂದೆ ನನಗೆ ಸಮಾಜ ಕಲ್ಯಾಣ ಖಾತೆ ಬೇಖು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದೆ. ಅದರಂತೆ ಅವರು ಇಂದು ನೀಡಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾಗಿರುವಂತೆ ಯಾವುದೇ ಅಸಮಾಧಾನ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಕಾಲದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಒಬ್ಬರೇ ನಿರ್ವಹಣೆ ಮಾಡುವುದು ಉತ್ತಮ ಎಂಬ ಕಾರಣದಿಂದ ಸುಧಾಕರ್ ಅವರಿಗೆ ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನು ಸಿಎಂ ನೀಡಿದ್ದಾರೆ. ಸೋದರ ಸುಧಾಕರ್ ವೈದ್ಯರಾಗಿದ್ದು, ಆರೋಗ್ಯ ಇಲಾಖೆಯನ್ನ ಉತ್ತಮವಾಗಿ ನಿರ್ವಹಿಸಲಿದ್ದಾರೆ. ಹೀಗಾಗಿ ಇದರಲ್ಲಿ ರಾಜಕೀಯ ಏನು ಇಲ್ಲ ಎಂದು ಹೇಳಿದರು.
ಬಳಿಕ ಮಾತನಾಡಿದ ಸುಧಾಕರ್, ಬಿಹಾರ ಮತ್ತು ಉಪ ಚುನಾವಣೆ ಹಿನ್ನೆಲೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ದೊರೆತಿಲ್ಲ. ಈ ಹಿನ್ನೆಲೆ ಕೆಲ ತಾಂತ್ರಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಖಾತೆಗಳ ಬದಲಾವಣೆಯಾಗಿದೆ. ಶ್ರೀರಾಮುಲು ಅಣ್ಣನವರು ರಾಜಕೀಯದಲ್ಲಿ ನನಗಿಂತ ಹಿರಿಯರು. ಸಮಾಜ ಕಲ್ಯಾಣ ಅನ್ನೋದು ಪ್ರಬಲ ಖಾತೆ. ಮುಖ್ಯಮಂತ್ರಿಗಳ ಖಾತೆಯ ಬದಲಾವಣೆ ಬಗ್ಗೆ ಒಂದು ತಿಂಗಳಿನಿಂದ ನಮ್ಮೊಂದಿಗೆ ಚರ್ಚೆ ನಡೆಸಿದ್ದರು. ಸಮಾಜದ ಸ್ವಾಸ್ಥ್ಯವನ್ನು ಉತ್ತಮ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಹೊಣೆಯನ್ನ ಅಣ್ಣವರಿಗೆ ನೀಡಿದ್ದಾರೆ. ಇದು ಅವರ ಮೆಚ್ಚನ ಇಲಾಖೆಯೂ ಹೌದು ಎಂದು ಹೇಳಿದರು.
Kanna muchalle aata ansuthe