ಬೆಂಗಳೂರು: ಕೊರೊನಾ ನೆಗೆಟೀವ್ ವರದಿ ನೀಡುತ್ತಿದ್ದ ಆರೋಗ್ಯ ಸೇವಾ ಸಿಬ್ಬಂದಿಯನ್ನು ಪಾಲಿಕೆ ಸೇವೆಯಿಂದ ವಜಾ ಮಾಡಲಾಗಿದೆ.
ಪೊಬ್ಬತ್ತಿ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆ ಶಾಂತಿ ಹಾಗೂ ಲ್ಯಾಬ್ ಟೆಕ್ನಿಷಿಯನ್ ಮಹಾಲಕ್ಷ್ಮಿ (ಎನ್.ಯು.ಹೆಚ್.ಎಂ ಸಿಬ್ಬಂದಿ) ವಜಾಗೊಂಡವರು.
ಕೋವಿಡ್ -19ರ ಸ್ವಾಬ್ ಪರೀಕ್ಷೆಗಳ ಮಾರ್ಗಸೂಚಿಗಳನ್ನು ಪಾಲಿಸದೇ ಲ್ಯಾಬ್ ನೆಗೆಟೀವ್ ವರದಿ ನೀಡಲು ರೂ.2500 ಹಣ ಪಡೆದು, ಕೊರೊನಾ ನೆಗೆಟೀವ್ ವರದಿ ನೀಡಿರುವುದು ಮಂಗಳವಾರ ದೃಢಪಟ್ಟ ಕಾರಣ ಪಾಲಿಕೆಯ ಕೆಲಸ ಕಾರ್ಯಗಳಿಂದ ವಜಾಗೊಳಿಸಲಾಗಿದೆ ಎಂದು ಜಂಟಿ ಆಯುಕ್ತ ( ದಕ್ಷಿಣ) ತಿಳಿಸಿದ್ದಾರೆ.
ಮುಂದುವರೆದಂತೆ, ಈ ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವೈದಾಧಿಕಾರಿ ಡಾ. ಶೈಲಜಾ ಅವರನ್ನು ಕರ್ತವ್ಯ ನಿರ್ಲಕ್ಷತನ ಹಿನ್ನೆಲೆಯಲ್ಲಿ ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಂಟಿ ಆಯುಕ್ತ ( ದಕ್ಷಿಣ) ತಿಳಿಸಿದ್ದಾರೆ.