ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮನ್ನು ಬೆಳೆಸಿದ್ದೇನೆ ಎಂದು ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ. ಆದರೆ, ನೂರಕ್ಕೆ ನೂರರಷ್ಟು ಹೇಳುತ್ತಿದ್ದೇನೆ, ಅವರು ನಮ್ಮನ್ನು ಬೆಳೆಸಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಪಕ್ಷವನ್ನು ತೊರೆದಿರುವ ಭೈರತಿ ಬಸವರಾಜ್, ಎಸ್ ಟಿ ಸೋಮಶೇಖರ್ ಮತ್ತು ಮುನಿರತ್ನ ತಮ್ಮ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಈ ರೀತಿ ತಿರುಗೇಟು ನೀಡಿದ್ದು,
ಭೈರತಿ ಬಸವರಾಜ್, ಮುನಿರತ್ನ ಹಾಗೂ ನನ್ನನ್ನು ಸಿದ್ದರಾಮಯ್ಯ ಬೆಳೆಸಿಲ್ಲ. ನಾವು ಮೊದಲಿನಿಂದಲೂ ಕಾಂಗ್ರೆಸ್‌ನಲ್ಲಿದ್ದೆವು. ಸಿದ್ದರಾಮಯ್ಯ ಕೊನೆಯಲ್ಲಿ ಕಾಂಗ್ರೆಸ್ ಸೇರಿದ್ದು. ನಾವೇನೂ ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ. ಅವರ ಮೇಲೆ ಮುನಿಸಿಕೊಂಡು ಪಕ್ಷ ಬಿಟ್ಟಿಲ್ಲ ಎಂದು ಹೇಳಿದ್ದಾರೆ.
ಆರ್.ಆರ್.ನಗರ ಕ್ಷೇತ್ರದಲ್ಲಿ ಮುನಿರತ್ನ ಗೆಲ್ಲುತ್ತಾರೆ. ಗೆದ್ದರೆ ಸಚಿವರಾಗುತ್ತಾರೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಅದರಂತೆ ಅವರು ಸಚಿವ ಸ್ಥಾನ ಪಡೆಯುತ್ತಾರೆ. ಮುನಿರತ್ನ ಸೋಲುವ ಪ್ರಶ್ನೆಯೇ ಇಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಮುನಿರತ್ನ ಕ್ಷೇತ್ರದ ಜನರಿಗಾಗಿ ಹೆಚ್ಚಿನ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಬೆಂಗಳೂರು ಅಭಿವೃದ್ಧಿ ಹೆಚ್ಚಿನ ಅನುದಾನ ನೀಡಿದ್ದೆ ಎಂಬುದು ಸರಿಯಲ್ಲ. ಬೆಂಗಳೂರಿನಲ್ಲಿ ಹೆಚ್ಚಿಗೆ ಆದಾಯ ಬರುತ್ತದೆ. ಅದರಂತೆ 27 ವಿಧಾನಸಭಾ ಕ್ಷೇತ್ರಕ್ಕೂ ಹಂಚಿಕೆಯಾಗುತ್ತದೆ. ಬೆಂಗಳೂರಿನ ಅಭಿವೃದ್ಧಿಗೆ ಸಿದ್ದರಾಮಯ್ಯ ಮನೆಯಿಂದ ಹಣ ತಂದುಕೊಟ್ಟಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಇನ್ನೂ ಇದೇ ವೇಳೆ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಚ್. ವಿಶ್ವನಾಥ್, ಸಿದ್ದರಾಮಯ್ಯ 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನುಭವಿಸಿದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ.