ನ್ಯೂಡೆಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಇದೇ ನವೆಂಬರ್‌ನಲ್ಲಿ ಮೂರು ಬಾರಿ ಭೇಟಿಯಾಗಿ ಉಂಟಾಗಿರುವ ಗಡಿ ಸಮಸ್ಯೆ ಸೇರಿ ಇತರ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನವೆಂಬರ್‌ನಲ್ಲಿ ಮೂರು ಜಾಗತಿಕ ಶೃಂಗಸಭೆಗಳು ನಡೆಯಲಿದ್ದು, ಈ ಮೂರು ಶೃಂಗಸಭೆಗಳಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪಾಲ್ಗೊಳ್ಳಲ್ಲಿದ್ದಾರೆ. ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಈ ಮೂರು ಶೃಂಗಸಭೆಗಳ ವರ್ಚುವಲ್ ಸಭೆಗಳಾಗಿರಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಲಡಾಖ್ ಸಂಘರ್ಷ ಮತ್ತು ಎಲ್‌ಎಸಿ ಕಾರ್ಯಾಚರಣೆಯಾದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಪರಸ್ಪರ ಭೇಟಿಯಾಗತ್ತಿದ್ದಾರೆ. ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರು ಸಂಘರ್ಷದಲ್ಲಿ ಮೃತರಾದ ಬಳಿಕ ಉಭಯ ದೇಶಗಳ ನಡುವಿನ ಸಹಕಾರ ಮತ್ತು ಸೌಹಾರ್ಧ ಸಂಬಂಧ ಹಳಿ ತಪ್ಪಿದ್ದು, ಇದನ್ನು ಮತ್ತೆ ಟ್ರಾಕ್ ಗೆ ತರುವ ನಿಟ್ಟಿನಲ್ಲಿ ಈ ಮೂರು ಸಭೆಗಳು ಉಭಯ ದೇಶಗಳಿಗೆ ಮಹತ್ವದ್ದಾಗಿದೆ.
ನವೆಂಬರ್ 10ರಂದು ಶಾಂಘೈ ಸಹಕಾರ ಸಂಸ್ಥೆಯ ಮುಖ್ಯಸ್ಥರ ಶೃಂಗಸಭೆ ನಡೆಯಲಿದ್ದು, ನವೆಂಬರ್ 17ರಿಂದ ಬ್ರಿಕ್ಸ್ ಸಭೆ ಆರಂಭವಾಗಲಿದೆ. ಅಂತೆಯೇ ನವೆಂಬರ್ 21 ಮತ್ತು 22ರಂದು ಜಿ20 ಶೃಂಗಸಭೆ ನಡೆಯಲಿದೆ. ಜಿ20 ಶೃಂಗಸಭೆಯನ್ನು ಸೌದಿ ಅರೇಬಿಯಾ ಆಯೋಜನೆ ಮಾಡಲಿದ್ದು, ಬ್ರಿಕ್ಸ್ ಮತ್ತು ಎಸ್‌ಸಿಒ (ಶಾಂಘೈ ಸಹಕಾರ ಸಂಸ್ಥೆಯ ಮುಖ್ಯಸ್ಥರ ಶೃಂಗಸಭೆ)ಯ ಆಯೋಜನೆ ಜವಾಬ್ದಾರಿಯನ್ನು ರಷ್ಯಾ ಹೊಂದಿದೆ.