NEWSನಮ್ಮರಾಜ್ಯರಾಜಕೀಯ

ಮೇ 15ರೊಳಗೆ ಡಿಕೆಶಿಗೆ ಹೈಕಮಾಂಡ್​ನಿಂದ ಸಿಗಲಿದೆಯೇ ಬಿಗ್ ಬರ್ತ್​ಡೇ ಗಿಫ್ಟ್?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಒಳಬೇಗುದಿ ಈಗ ತಾರಕಕ್ಕೇರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಇಲ್ಲಿಯವರೆಗೆ ಬೂದಿ ಮುಚ್ಚಿದ ಕೆಂಡತಿದ್ದ ನಾಯಕತ್ವ ಬದಲಾವಣೆಯ ಕೂಗು ಮತ್ತೆ ಜ್ವಾಲೆಯ ರೀತಿ ಜೋರಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಇನ್ನು ಈ ಬೆಳವಣಿಗೆಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌನ ಈಗ ಅಹಿಂದ ಸಚಿವರ ನಿದ್ದೆಗೆಡಿಸಿದೆ. ಸತತ ಸಭೆಗಳ ನಂತರವೂ ಸಿಎಂ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಲ್ಲದೆ, ಸಿಎಂ ಬಣದ ಸಚಿವರ ರಹಸ್ಯ ಸಭೆಯಲ್ಲೂ ಕೂಡ ಅವರು ಮುಕ್ತವಾಗಿ ಮಾತನಾಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಅಹಿಂದ ಸಚಿವರು ಈಗ ಹೈಕಮಾಂಡ್ ಮನೆ ಕದ ತಟ್ಟುತ್ತಿದ್ದಾರೆ.

ಸಿಎಂ ಮೌನದ ರಹಸ್ಯ ತಿಳಿಯದಾದ ಸಚಿವರು?: ಇತ್ತೀಚೆಗೆ ಸಚಿವರಾದ ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್, ಜಮೀರ್ ಅಹ್ಮದ್ ಖಾನ್ ಮತ್ತು ಮಾಜಿ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಪ್ರಮುಖ ಅಹಿಂದ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದರು.

ರಾಜ್ಯ ರಾಜಕಾರಣದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಈ ನಾಯಕರು ಪ್ರಯತ್ನಿಸಿದರೂ ಸಿಎಂ ಸಿದ್ದರಾಮಯ್ಯ ಮಾತ್ರ ಮನಬಿಚ್ಚಿ ಮಾತನಾಡದೆ ಮೌನಕ್ಕೆ ಶರಣಾಗಿದ್ದರು. ಗೌಪ್ಯ ಸಭೆಗಳಲ್ಲೂ ಸಿಎಂ ಕಡೆಯಿಂದ ಯಾವುದೇ ಭರವಸೆ ಸಿಗದ ಕಾರಣ, ಸಿದ್ದರಾಮಯ್ಯ ಬಣದ ಸಚಿವರಿಗೆ ಒಳಗಿಂದೊಳಗೆ ಈಗ ಏನೋ ನಡೆಯುತ್ತಿದೆ ಎಂಬ ಅನುಮಾನ ಶುರುವಾಗಿದೆ.

ದೆಹಲಿಗೆ ಹಾರಿದ ಸತೀಶ್-ಮಹದೇವಪ್ಪ: ಸಿಎಂ ಮೌನದಿಂದ ಕಂಗೆಟ್ಟ ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ತುರ್ತಾಗಿ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸುರ್ಜೇವಾಲ ಅವರನ್ನು ಭೇಟಿಯಾಗಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೆ ಅಹಿಂದ ನಾಯಕರ ಭವಿಷ್ಯವೇನು? ತಮ್ಮ ಸ್ಥಾನಮಾನಗಳು ರಕ್ಷಣೆಯಾಗುತ್ತವೆಯೇ? ಎಂಬ ಬಗ್ಗೆ ಸ್ಪಷ್ಟತೆ ಕೇಳಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ, ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಡಿಕೆಶಿಗೆ ನೀಡಿದಂತೆ ತಮಗೂ ಅಧಿಕಾರ ನೀಡಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಡಿಕೆಶಿ ಸಿಗಲಿದೆಯೇ ಬಿಗ್ ಬರ್ತ್​ಡೇ ಗಿಫ್ಟ್?: ಈ ಮಧ್ಯೆ, ಕಾಂಗ್ರೆಸ್ ಹೈಕಮಾಂಡ್​ನಿಂದ ಡಿ.ಕೆ. ಶಿವಕುಮಾರ್​ಗೆ ಬಿಗ್ ಬರ್ತ್​ಡೇ ಗಿಫ್ಟ್ ಸಿಗಲಿದೆ ಎಂಬ ಊಹಾಪೋಹಗಳ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ನೀಡಿರುವ ಪ್ರತಿಕ್ರಿಯೆ ಕೂಡ ಕುತೂಹಲಕ್ಕೆ ಕಾರಣವಾಗಿದೆ. ಇಷ್ಟು ದಿನ ‘‘ಸಿಎಂ ಬದಲಾವಣೆ ಇಲ್ಲ’’ ಎನ್ನುತ್ತಿದ್ದ ಪರಮೇಶ್ವರ್, ಈಗ ‘‘ಹೈಕಮಾಂಡ್ ನಿರ್ಧಾರವೇ ಅಂತಿಮ’’ ಎಂದಿರುವುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನು ಬರುವ ಮೇ 15ರಂದು ಡಿಕೆಶಿ ಹುಟ್ಟುಹಬ್ಬದ ವೇಳೆಗೆ ಹೈಕಮಾಂಡ್ ಏನಾದರೂ ‘ಗಿಫ್ಟ್’ ನೀಡಲಿದೆಯೇ ಎಂಬ ಚರ್ಚೆ ಜೋರಾಗಿದೆ. ಇತ್ತ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಹಿಂದ ನಾಯಕರು ಈಗಲೇ ದಾಳ ಉರುಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಒಟ್ಟಾರೆ ರಾಜ್ಯ ಕಾಂಗರೆಸ್‌ ಸರ್ಕಾರ ಅತಂತ್ರ ಸ್ಥಿತಿಯಲ್ಲಿ ನಡೆಯುತ್ತಿದೆ ಎನ್ನುವುದು ಕಟು ಸತ್ಯವಾಗಿದೆ.

Megha
the authorMegha

Leave a Reply

error: Content is protected !!
Latest news
ಬೇಕಾಬಿಟ್ಟಿ ಗ್ಯಾರಂಟಿಗಳ ಕೊಡುವುದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ಸರ್ಕಾರಗಳಿಗೆ ಎಚ್ಚರಿಕೆ ನೀಡಿ ವಿತ್ತ... ಲಾರಿ ಓವರ್‌ಟೇಕ್‌ ಮಾಡುವ ವೇಳೆ ಚಾಲಕನ ನಿಯಂತ್ರ ಕಳೆದುಕೊಂಡ ಕಾರು ಪಲ್ಟಿ: ದಂಪತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಆತಂಕಬೇಡ: ಸಿಎಂ ಶಿವಕುಮಾರ್‌ ಭರವಸೆ KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ ನೌಕರನ ವಿರುದ್ಧ ಸಾಬೀತಾಗಿರುವ ದುರ್ನಡತೆಗೆ ಹೋಲಿಸಿದರೆ ಆತನ ವಜಾ ಮಾಡಿರುವುದು ಕಾನೂನುಬಾಹಿರ,ಅತ್ಯಂತ ಕಠಿಣ ಶಿಕ್ಷೆ: ಸು... ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : GBA ದಕ್ಷಿಣ ಆಯುಕ್ತ BMTC: ಜೂನ್‌ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್‌ ಖಾತೆ ವಿವರ ... ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಖಂಡ್ರೆ ಎಚ್ಚರಿಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೊಂದೇ ಆಯುಧ: ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ