ಪ್ರಾಮಾಣಿಕತೆ ಮೆರೆದ KSRTC ಸಿಬ್ಬಂದಿ – ಆಭರಣ ಅಡವಿಟ್ಟು ತಂದಿದ್ದ ಹಣ ಕಳೆದು ಕೊಂಡ ಪ್ರಯಾಣಿಕನಿಗೆ ಮರಳಿ ಕೊಟ್ಟ ನೌಕರರು

ತಿಪಟೂರು: ಸರ್ಕಾರ ಸಾರಿಗೆ ನೌಕರರಿಗೆ ನ್ಯಾಯಬದ್ಧವಾಗಿ ಕೊಡಬೇಕಿರುವ ವೇತನ ಸೌಲಭ್ಯ ಕೊಡದೆ ಅವರನ್ನು ಆರ್ಥಿಕವಾಗಿ ಬಳಲುವಂತೆ ಮಾಡಿದ್ದರೂ ಕೂಡ ಬೇರೆಯವರ ಹಣಕ್ಕೆ ಆಸೆ ಪಡದ ಚಾಲನಾ ಸಿಬ್ಬಂದಿಗಳು ಪ್ರಾಮಾಣಿಕತೆ ಮೆರೆಯುತ್ತಿರುವುದು ಸಂಸ್ಥೆಯ ಘನತೆಯನ್ನು ಹೆಚ್ಚಿಸುತ್ತಲೇ ಇದೆ.

ಹೌದು ಸಾರಿಗೆ ನೌಕರರು ಪ್ರಯಾಣಿಕರು ಮರೆತು ಬಿಟ್ಟುಹೋದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವಿರುವ ಬ್ಯಾಗುಗಳನ್ನು ವಾರಸುದಾರರ ಪತ್ತೆಹಚ್ಚಿ ಪ್ರಾಮಾಣಿಕವಾಗಿ ಅವರಿಗೆ ತಲುಪಿಸುವ ಕೆಲಸವನ್ನು ತಮ್ಮದೇ ಕೆಲಸ ಎಂಬ ರೀತಿಯಲ್ಲಿ ನಿಷ್ಠೆಯಿಂದ ಮಾಡುತ್ತಿರುವ ಬಗ್ಗೆ ನಾವು ಮಾಧ್ಯಮದವರು ವರದಿ ಮಾಡುತ್ತಲೇ ಇರುತ್ತೇವೆ.
ಅದರಂತೆ ಇಂದು ಕೂಡ ಸಾರಿಗೆ ನೌಕರರು ಪ್ರಾಮಾಣಿಕತೆ ಮೆರೆದಿರುವ ಬಗ್ಗೆ ಮಾಹಿತಿ ಬಂದಿದ್ದು ಅದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ತುಮಕೂರು ವಿಭಾಗ ತಿಪಟೂರು ಘಟಕದ ಬಸ್ ಚಾಲಕರು ನಿಷ್ಠೆಗೆ ಹಿಡಿದ ಕನ್ನಡಿಯಾಗಿದೆ. ಈ ಬಸ್ ಚನ್ನರಾಯಪಟ್ಟಣದಿಂದ ತಿಪಟೂರಿಗೆ ನಿನ್ನೆ ಮಧ್ಯಾಹ್ನ 1.15ಕ್ಕೆ ಬರುತ್ತಿದ್ದ ವೇಳೆ ರೂಪೇಶ್ ಎಂಬುವರು ಜಂಬೂರಿನಲ್ಲಿ ಇಳಿಯಲು ವಾಹನ ಹತ್ತಿದರು.
ರೂಪೇಶ್ ಅದೇ ತಾನೆ ತನ್ನ ಕಷ್ಟಗಳಿಗೋಸ್ಕರ ಬಂಗಾರದ ಒಡವೆಗಳನ್ನು ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಗಿರವಿ ಇಟ್ಟು 85,000 ರೂ.ಗಳನ್ನು ಪಡೆದು ಪರ್ಸ್ನಲ್ಲಿ ಇಟ್ಟುಕೊಂಡು ಬಂದಿದ್ದರು. ಆದರೆ, ಅವರು ಬಸ್ ಇಳಿಯುವಾಗ ತನ್ನ ಪರ್ಸನ್ನು ಈ ಬಸ್ನಲ್ಲೇ ಬಿಟ್ಟು ಮರೆತು ಇಳಿದು ಹೋಗಿದ್ದರು.
ಬಳಿಕ ಬಸ್ ನುಗ್ಗೆಹಳ್ಳಿಗೆ ಬರುತ್ತಿದ್ದಂತೆ ವಾರಸುದಾರರಿಲ್ಲದ ಆ ಪರ್ಸನ್ನು ನಿರ್ವಾಹಕ ದಯಾನಂದ್ ಅವರು ಪರಿಶೀಲಿಸಿದಾಗ 85,000 ರೂ. ಹಾಗೂ ಇತರ ದಾಖಲೆಗಳು ಇರುವುದು ಕಂಡು ಬಂದಿದೆ. ಕೂಡಲೇ ಆ ಪರ್ಸನಲ್ಲಿ ಯಾರದು ಎಂಬ ವಿಳಾಸ ಸಿಗಬಹುದೇ ಎಂದು ಹುಡುಕಿದಾಗ ಆ ವ್ಯಕ್ತಿಯ ಮೊಬೈಲ್ಗೆ ಫೋನ್ ನಂಬರ್ ಸಿಕ್ಕಿದೆ. ತಡಮಾಡದೆ ಅವರಿಗೆ ಫೋನ್ ಮಾಡಿ ಹಣ ಸಿಕ್ಕಿರುವ ವಿಷಯ ತಿಳಿದ್ದಾರೆ.
ಅಲ್ಲಿಯವರೆಗೆ ಹಣ ಕಳೆದುಕೊಂಡಿದ್ದ ರೂಪೇಶ್ ತುಂಬಾ ಗಾಬರಿ ಹಾಗೂ ದುಃಖದಿಂದ ಸಂಕಟಪಡುತ್ತಿದ್ದರು. ಆದರೆ, ವಿಷಯ ತಿಳಿದ ಬಳಿಕ ಸಮಾಧಾನಗೊಂಡರು. ಇನ್ನು ಪ್ರಯಾಣಿಕ ರೂಪೇಶ್ ಅವರನ್ನು ತಿಪಟೂರು ಬಸ್ ನಿಲ್ದಾಣಕ್ಕೆ ಕರೆಸಿ ನಿರ್ವಾಹಕ ದಯಾನಂದ್ ಹಾಗೂ ಚಾಲಕ ಜಗದೀಶ್ ಅವರು ಸಂಚಾರಿ ನಿಯಂತ್ರಕರ ಸಮ್ಮುಖದಲ್ಲಿ ಹಣ ಹಾಗೂ ಇತರ ದಾಖಲೆಗಳನ್ನು ತಲುಪಿಸಿದ್ದಾರೆ.
ಸಂಸ್ಥೆಯ ಚಾಲನಾ ಸಿಬ್ಬಂದಿಗಳ ಈ ಪ್ರಾಮಾಣಿಕತೆಯ ಬಗ್ಗೆ ರೂಪೇಶ್ ಪ್ರತಿಕ್ರಿಯೆ ನೀಡಿ ನನ್ನ ಕಷ್ಟಕಾಲದಲ್ಲಿ ಹಣ ಹಿಂತಿರುಗಿಸಿದ ಚಾಲಕ ಹಾಗೂ ನಿರ್ವಾಹಕರು ದೇವರ ಸಮಾನರೆಂದು ಅವರನ್ನು ಶ್ಲಾಘಿಸಿದ್ದಾರೆ.
ಪ್ರಾಮಾಣಿಕತೆ ಮೆರೆದ ತಿಪಟೂರು ಘಟಕದ ಚಾಲನಾ ಸಿಬ್ಬಂದಿಗಳಾದ ದಯಾನಂದ್ ಹಾಗೂ ಜಗದೀಶ್ ಅವರನ್ನು ಸಂಸ್ಥೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಅಲ್ಲದೆ ಇವರಿಗೆ ಸೂಕ್ತ ಬಹುಮಾನ ಹಾಗೂ ಪ್ರಶಂಸನ ಪತ್ರ ನೀಡಬೇಕು ಎಂದು ಜನತೆ ಹೇಳಿದ್ದಾರೆ.
Related









