ಅನ್ನದಾತರಿಗೆ ಸಾಲ ಕೊಡಲು ಸಿಬಿಲ್ ಸ್ಕೋರ್ ತಾಳೆ ಹಾಕುವ ಪದ್ಧತಿ ಕೈಬಿಡಬೇಕು: ಆರ್‌ಬಿಐ ಅಧಿಕಾರಿಗಳಿಗೆ ಕುರುಬೂರು ಶಾಂತಕುಮಾರ್ ಆಗ್ರಹ
ಇತ್ತೀಚೆಗೆ ರಿಸರ್ವ್ ಬ್ಯಾಂಕ್ ನಿಯಮ ರೈತರು, ಬಡವರನ್ನು ಬ್ಯಾಂಕಿನಿಂದ ದೂರ ತಳ್ಳುವ ಕ್ರಮವಾಗಿದೆ. ಸಂಕಷ್ಟ ಕಾಲದಲ್ಲಿ ಕೃಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ, ಮದುವೆ, ಆಸ್ಪತ್ರೆ ವೆಚ್ಚ ಮುಂತಾದ ತುರ್ತು ಅಗತ್ಯಗಳಿಗಾಗಿ ಬ್ಯಾಂಕುಗಳಲ್ಲಿ ಚಿನ್ನ ಗಿರವಿ ಇಟ್ಟು ಸಾಲ ಪಡೆಯುವ ನಿಯಮಗಳ ಬದಲಾವಣೆ ಮಾಡಿರುವುದು ಖಾಸಗಿ ಫೈನಾನ್ಸರ್‌ಗಳ ಹಾಗೂ ಮನಿಲೆಂಡರ್ಸಗೆ ಅನುಕೂಲವಾಗಿದೆ. ಇದೇ ಏಪ್ರಿಲ್ ಒಂದರಿಂದ ಜಾರಿಗೆ ತಂದಿರುವ ರಿಸರ್ವ್ ಬ್ಯಾಂಕ್ ನಿಯಮ ಪಾಲನೆಯಿಂದ ಬ್ಯಾಂಕುಗಳು ರೈತರನ್ನು ಸಂಕಷ್ಟಕ್ಕೆ ದೂಡಿವೆ

ಬೆಂಗಳೂರು: ರೈತರ ಹಣಕಾಸಿನ ನಿರ್ವಹಣೆ ಬಗ್ಗೆ ಬ್ಯಾಂಕುಗಳಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಹಲವಾರು ಸಮಸ್ಯೆಗಳು ಬಂದಿರುವ ಕಾರಣ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆರ್‌ಬಿಐ ಅಧಿಕಾರಿಗಳಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.

ಬೆಂಗಳೂರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಭಾಂಗಣದಲ್ಲಿ ಪ್ರಧಾನ ವ್ಯವಸ್ಥಾಪಕ ಮೀನಾಕ್ಷಿ ಘಾಟ್, ವ್ಯವಸ್ಥಾಪಕರಾದ ವಿಜಯಶ್ರೀ ಸಮ್ಮುಖದಲ್ಲಿ ಇಂದು ಸುಮಾರು ಒಂದು 1. 45 ಗಂಟೆ ನಡೆದ ಸಭೆಯಲ್ಲಿ ಈ ವಿಚಾರ ಚರ್ಚಿಸಿದರು.
ಇತ್ತೀಚೆಗೆ ರಿಸರ್ವ್ ಬ್ಯಾಂಕ್ ನಿಯಮ ರೈತರು, ಬಡವರನ್ನು ಬ್ಯಾಂಕಿನಿಂದ ದೂರ ತಳ್ಳುವ ಕ್ರಮವಾಗಿದೆ. ಸಂಕಷ್ಟ ಕಾಲದಲ್ಲಿ ಕೃಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ, ಮದುವೆ, ಆಸ್ಪತ್ರೆ ವೆಚ್ಚ ಮುಂತಾದ ತುರ್ತು ಅಗತ್ಯಗಳಿಗಾಗಿ ಬ್ಯಾಂಕುಗಳಲ್ಲಿ ಚಿನ್ನ ಗಿರವಿ ಇಟ್ಟು ಸಾಲ ಪಡೆಯುವ ನಿಯಮಗಳ ಬದಲಾವಣೆ ಮಾಡಿರುವುದು ಖಾಸಗಿ ಫೈನಾನ್ಸರ್‌ಗಳ ಹಾಗೂ ಮನಿಲೆಂಡರ್ಸಗೆ ಅನುಕೂಲವಾಗಿದೆ. ಇದೇ ಏಪ್ರಿಲ್ ಒಂದರಿಂದ ಜಾರಿಗೆ ತಂದಿರುವ ರಿಸರ್ವ್ ಬ್ಯಾಂಕ್ ನಿಯಮ ಪಾಲನೆಯಿಂದ ಬ್ಯಾಂಕುಗಳು ರೈತರನ್ನು ಸಂಕಷ್ಟಕ್ಕೆ ದೂಡಿವೆ ಎಂದು ವಿವರಿಸಿದರು.
ಇನ್ನು ಬ್ಯಾಂಕುಗಳಲ್ಲಿ ಚಿನ್ನ ಗಿರವಿ ಇಡುವ ವ್ಯಕ್ತಿಯ ಸಿಬಿಲ್ ಸ್ಕೋರ್ ತಾಳೆ ಹಾಕುತ್ತಾರೆ ಹಾಗೂ ಆದಾಯ ಪತ್ರ, ಪ್ಯಾನ್ ಕಾರ್ಡ್ ಬೇಕು ಎನ್ನುತ್ತಾರೆ. ಇಷ್ಟು ಕಠಿಣ ನಿಯಮಗಳನ್ನು ಜಾರಿಗೆ ತಂದಿರುವುದರಿಂದ ರೈತರಿಗೆ ಆಪತ್ಕಾಲದಲ್ಲಿ ಚಿನ್ನ ಗಿರವಿ ಇಟ್ಟು ಸಾಲದ ಹಣ ಪಡೆಯಲು ಕಷ್ಟವಾಗುತ್ತಿದೆ. ಈ ನಿಯಮ ಕೂಡಲೇ ರದ್ದಾಗ ಬೇಕು ಎಂದು ಒತ್ತಾಯಿಸಿದರು.
ಹಿಂದಿನ ವರ್ಷಗಳಲ್ಲಿ ಚಿನ್ನ ಗಿರವಿ ಇಟ್ಟವರು ಪ್ರತಿವರ್ಷ ಬ್ಯಾಂಕಿಗೆ ಬಡ್ಡಿ ಹಣ ತುಂಬಿದರೆ ನವೀಕರಿಸಬಹುದಾಗಿತ್ತು. ಆದರೆ, ಈಗ ಅಸಲು ಬಡ್ಡಿ ಸಂಪೂರ್ಣ ಹಣ ತುಂಬಿ ನಂತರ ಹೊಸ ಸಾಲ ರೀತಿಯಲ್ಲಿ ನವೀಕರಿಸಿ ಕೊಳ್ಳಬೇಕು ಎನ್ನುವ ನಿಯಮವು ರೈತರನ್ನು ಕಗ್ಗತ್ತಲಲ್ಲಿ ಇಟ್ಟಂತೆ ಆಗಿದೆ.
ಚಿನ್ನ ಗಿರವಿ ಇಡುವ ವ್ಯಕ್ತಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಖಾತೆ ಇರಬೇಕು. ಸಿಬಿಲ್ ಸ್ಕೋರ್ ಸರಿಯಾಗಿರಬೇಕು. ಅವರ ಆದಾಯದ ಮೂಲ ದೃಢೀಕರಣ ಪತ್ರ ಇರಬೇಕು ಎನ್ನುವ ನಿಯಮಗಳನ್ನು ಜಾರಿಗೆ ತಂದಿರುವ ಕಾರಣ ವಿಶೇಷವಾಗಿ ತುರ್ತು ಸಂದರ್ಭದಲ್ಲಿ ರೈತರಿಗೆ ಸಾಲ ಸಿಗದಂತಾಗಿದೆ. ಕೂಡಲೇ ರಿಸರ್ವ ಬ್ಯಾಂಕ್ ಆಫ್ ಇಂಡಿಯ ನಿರ್ದೇಶನ ಕೊಟ್ಟು ಜಾರಿಯಲ್ಲಿರುವ ನಿಯಮಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು. ಇನ್ನು ಎರಡು ತಿಂಗಳ ಒಳಗೆ ನಿಯಮ ಬದಲಾಗದಿದ್ದರೆ ರಿಸರ್ವ್ ಬ್ಯಾಂಕ್ ಮುಂದೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಖಾಸಗಿ ಫೈನಾನ್ಸ್‌ಗಳು ಸಾಲ ನೀಡಿ ಒಂದೆರಡು ಕಂತಿನ ಹಣ ಪಾವತಿ ನಂತರ 15 ವರ್ಷಗಳ ಸಾಲವನ್ನು 25 ವರ್ಷಗಳ ವಾಯಿದೇ ನವೀಕರಿಸಿಕೊಂಡು ಸಾಲ ನೀಡಿದ್ದೇವೆ ಎಂದು ರೈತ ಗ್ರಾಹಕರಿಗೆ ಮೋಸ ಮಾಡುತ್ತಿವೆ ಈ ರೀತಿಯ ವಂಚನೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಇನ್ನು ಮನೆ ಸಾಲ ನೀಡಿ ಕೃಷಿ ಜಮೀನು ಅಡಮಾನ ಮಾಡಿ ಸಕಾಲಕ್ಕೆ ಸಾಲ ತೀರಿಸದ ರೈತರ ಜಮೀನು, ಮನೆ, ಜಪ್ತಿ ಮಾಡಿ ಹರಾಜು ಹಾಕುವ ಸರ್ಪೈಸಿ ಕಾಯ್ದೆಯನ್ನು ರದ್ದುಗೊಳಿಸಬೇಕು ಈ ಕಠಿಣ ನಿಯಮದಿಂದ ರೈತರು ಜಮೀನು ಮನೆ ಕಳೆದುಕೊಳ್ಳುತ್ತಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ನೀಡಿ ವಸುಲಾತಿಗಾಗಿ ಕಿರುಕುಳ ನೀಡುವ ಬಗ್ಗೆ ದೂರು ನೀಡಿದರೆ ಜಿಲ್ಲಾಡಳಿತ ನಮಗೆ ಅಧಿಕಾರವಿಲ್ಲವೆಂದು ಹೇಳುತ್ತದೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತಕ್ಕೆ ಹೆಚ್ಚಿನ ಅಧಿಕಾರ ನೀಡಿ ಕಠಿಣ ನಿಯಮ ರೂಪಿಸಬೇಕು ಎಂದರು.
ಚಿನ್ನ ಗಿರವಿ ಇಟ್ಟಾಗ ಒಂದು ಎಕರೆ ಒಂದು ಲಕ್ಷ ಸಾಲ ನೀಡುತ್ತೇವೆ ಚಿನ್ನದ ಮೌಲ್ಯವನ್ನು ಪರಿಗಣಿಸುವುದಿಲ್ಲ ಎಂಬ ನೀತಿ ಕೈ ಬಿಡಬೇಕು. ಕರ್ನಾಟಕ ಗ್ರಾಮೀಣ ಬ್ಯಾಂಕಿನ ವಯೋ ವೃದ್ಧ ಗ್ರಾಹಕರಿಗೆ ನಿಶ್ಚಿತ ಠೇವಣಿ, ಗ್ರಾಹಕರಿಗೆ ಬಡ್ಡಿ ಶೇ.10 ರಷ್ಟು ಕಡಿಮೆ ಮಾಡಿದ್ದಾರೆ. ಇದಕ್ಕೆ ಸೂಕ್ತ ಸಮಜಾಯಿಷಿ ಹಾಗೂ ಸಕಾರಣ ನೀಡುತ್ತಿಲ್ಲ. ರೈತರು ದೇಶದ ಜನರ ಅನ್ನದಾತರು ಆದ್ದರಿಂದ ರೈತರಿಗೆ ನೀಡುವ ಎಲ್ಲ ಬೆಳೆ ಸಾಲಗಳಿಗೆ ದೀರ್ಘಾವಧಿಯಾಗಿರಬೇಕು ಎಂದು ಆಗ್ರಹಿಸಿದರು.
ಇನ್ನು ರೈತರ ಮಕ್ಕಳು/ ಕುಟುಂಬ ಸದಸ್ಯರಿಗೆ ಶೈಕ್ಷಣಿಕ ಸಾಲ ನೀಡುವಾಗ ಯಾವುದೇ ಸಿಬಿಲ್ ಸ್ಕೋರ್ ಪರಿಗಣಿಸಬಾರದು. ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಈಗಾಗಲೇ ಇರುವ ಆರೋಗ್ಯ ವಿಮೆ ಕೃಷಿ ವಿಮೆ ಪರಿಣಾಮಕಾರಿಯಾಗಿ ನಿರ್ವಹಿಸಲು ಸೂಕ್ತ ಯೋಜನೆ ರೂಪಿಸಬೇಕು. ಸರ್ಕಾರದ ಯೋಜನೆಗಳಿಂದ ಬರುವ ಹಣವನ್ನು ನೈಜ ಫಲಾನುಭವಿಗಳಿಗೆ ನೀಡಬೇಕು. ಯಾವುದೇ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳಬಾರದು. ಇದನ್ನು ಉಲ್ಲಂಘನೆ ಮಾಡುವಂತಹ ಶಾಖಾ ವ್ಯವಸ್ಥಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು.
ರೈತರಿಗೆ ನೀಡುವ ಬೆಳೆ ಸಾಲ ಹಾಗೂ ಚಿನ್ನಾಭರಣಗಳ ಮೇಲೆ ನೀಡುವ ಸಾಲಕ್ಕೆ ಯಾವುದೇ ಸೇವಾ ಶುಲ್ಕವನ್ನು ವಿಧಿಸಬಾರದು. ಎಲ್ಲ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಲ್ಲಿ ರೈತರಿಗೆ ನೀಡುವ ಸಾಲವನ್ನು ಫಾರ್ಮರ್ಸ್ ಲೋನ್ ಎಂದು ನಮೂದಿಸಬೇಕು ಎಂದು ಹೇಳಿದರು.
ಇನ್ನು ನಾವು ಸಲ್ಲಿಸಿರುವ ಒತ್ತಾಯದ ಬಗ್ಗೆ ಪ್ರಧಾನ ವ್ಯವಸ್ಥಾಪಕರು ಈ ಎಲ್ಲ ಸಮಸ್ಯೆಗಳ ಕುರಿತು ಕೇಂದ್ರ ಕಚೇರಿಗೆ ಕಳುಹಿಸಿ ಕ್ರಮ ಕೈಗೊಳ್ಳಲು ಕೋರಲಾಗುವುದು ಎಂದು ಭರವಸೆ ನೀಡಿದರು. ರೈತ ಮುಖಂಡರ ನಿಯೋಗದಲ್ಲಿ ರೈತ ಸಂಘದ ದಾವಣಗೆರೆ ರವಿಕುಮಾರ್ ಬಲ್ಲೂರ್, ಶಿವಮೊಗ್ಗ ದೇವುಕುಮಾರ್, ತುಮಕೂರು ಶಿವಕುಮಾರ್, ಮೈಸೂರು ಜಿಲ್ಲೆಯ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್ ಮತ್ತಿತರರು ಇದ್ದರು.
Related









