ಬನ್ನೂರು: ಊರು, ಕೇರಿ, ಪಟ್ಟಣ, ನಗರಗಳು ಸುಂದರವಾಗಿ ಕಾಣಬೇಕಾದರೆ ಅದಕ್ಕೆ ಮುಖ್ಯ ಕಾರಣ ನಮ್ಮ ಪೌರಕಾರ್ಮಿಕರ ಶ್ರಮ ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ಕೃಷ್ಣ ಹೇಳಿದ್ದಾರೆ.
ಇಂದು ಪೌರಕಾರ್ಮಿಕ ಮನೆಗಳಿಗೆ ಭೇಟಿ ನೀಡಿ ಅವರ ಸಮಸ್ಯೆಯನ್ನು ಆಲಿಸಿದ ಬಳಿಕ ಮಾತನಾಡಿದರು. ಪುರಸಭೆಯ ಅದ್ಯಕ್ಷರಾಗಿ ಮೊದಲು ನಮ್ಮ ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಮುಖ್ಯ ಕರ್ತವ್ಯವಾಗಿದೆ. ನನ್ನ ಮಿತಿಯಲ್ಲಿ ನಿಮ್ಮ ಸಮಸ್ಯೆಗಳನ್ನು ನಾನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಸದಾ ಅನಾರೋಗ್ಯದ ವಾತವರಣದಲ್ಲಿ ಕೆಲಸ ಮಾಡುವ ನೀವು ಮೊದಲು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ಕೊಡಬೇಕು. ಕಸ ತೆಗೆಯುವಾಗ ಗ್ಲೌಸ್ ಹಾಗೂ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಪೌರಕಾರ್ಮಿಕರು ನಮಗೆ ಸರಿಯಾಗಿ ಗ್ಲೌಸ್ ಹಾಗೂ ಮಾಸ್ಕ್ ಗಳನ್ನು ಕೊಡುತ್ತಿಲ್ಲ. ನಮಗೆ ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ ಎಂದು ತಿಳಿಸಿದರು. ಅದಕ್ಕೆ ಇನ್ನು ಮುಂದೆ ಈ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ನೀವು ಆರೋಗ್ಯ ನೋಡಿಕೊಳ್ಳಿ. ಜತೆಗೆ ನಿಮ್ಮ ಮಕ್ಕಳನ್ನು ವಿದ್ಯವಂತರನ್ನಾಗಿ ಮಾಡಲು ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.
ಸರಿಯಾಗಿ ನಿಯಮ ಪಾಲಿಸದೆ ದೇಶದಲ್ಲಿ ಪ್ರತಿ ವರ್ಷ ಒಂದು ಸಾವಿರ ಮಂದಿ ಮ್ಯಾನ್ ಹೊಲ್ ಗಳಳಲ್ಲಿ ಸಿಲುಕಿ ಬಲಿಯಾಗುಗುತ್ತಿದ್ದಾರೆ. ಅದು ನಮ್ಮ ರಾಜ್ಯದಲ್ಲಿಯೂ ಕೂಡ ನಡೆಯುತ್ತಿದೆ. ನಮ್ಮ ತಾಲೂಕಿನ ಹನುಮನಹಾಳು ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕ ಮುರುಗನ್ ಕೂಡ ಮೃತಪಟ್ಟಿದ್ದರು. ಇಂಥ ಘಟನೆಗಳು ನಡೆಯಬಾರದು ಎಂದರೆ, ಕೆಲಸದ ವೇಳೆ ನೀವು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಪೌರಕಾರ್ಮಿಕರ ಸಮಸ್ಯೆಗಳು
ಪೌರಕಾರ್ಮಿಕರು, ಗ್ಲೌಸ್ ಕೊರತೆ, ಯೂನಿಫಾರಂ ಒದಗಿಸುವುದು, ಕೊರೊನಾ ಪೀಡಿತ ಪೌರಕಾರ್ಮಿಕರ ಆಸ್ಪತ್ರೆ ಬಿಲ್ ಕ್ಲೈಮ್ ಆಗದಿರುವುದು ಹಾಗೂ ಇನ್ನಿತರ ಸೌಲಭ್ಯಗಳ ಅನಾನುಕೂಲತೆಗಳ ಬಗ್ಗೆ ಚರ್ಚಿಸಿದರು. ಶೀಘ್ರದಲ್ಲೇ ಪರಿಹಾರ ಮಾಡುವುದಾಗಿ ತಿಳಿಸಿದರು.