ಬೆಂಗಳೂರು: ಸಹಕಾರ ಇಲಾಖೆಯ ಆರ್ಥಿಕ ಸ್ಪಂದನೆಯಡಿ ವಿವಿಧ ವಲಯದ ಜನರಿಗೆ 39,600 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020 ಉದ್ಘಾಟಿಸಿ ಮಾತನಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಈಗಾಗಲೇ ರಾಜ್ಯದ ಸಹಕಾರ ಇಲಾಖೆ ಮತ್ತು ಸಹಕಾರ ಸಂಸ್ಥೆಗಳು ಬಡಜನರಿಗೆ, ವಲಸೆ ಕಾರ್ಮಿಕರಿಗೆ, ದುರ್ಬಲ ವರ್ಗಗಳ ಜನರಿಗೆ ಆಹಾರ ವಿತರಣೆ, ದವಸಧಾನ್ಯಗಳ ವಿತರಣೆ, ತರಕಾರಿ ವಿತರಣೆಗೆ ಸಹಾಯ ಮಾಡಿವೆ ಎಂದು ತಿಳಿಸಿದರು.
ಆತ್ಮ ನೀರ್ ಬರ್ ಪ್ಯಾಕೇಜ್ ಅಡಿ ಈಗಾಗಲೇ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಗಳನ್ನು ಘೋಷಿಸಿದೆ ರೈತ ಉತ್ಪಾದನಾ ಸಂಸ್ಥೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬಲಿಷ್ಠಗೊಳಿಸಲು 4525 ಕೋಟಿ ರೂ.ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ ಎಂದರು.
ಸಹಕಾರ ವ್ಯವಸ್ಥೆ ಒಂದು ಆರ್ಥಿಕ ವ್ಯವಸ್ಥೆಯಾಗಿದೆ. ಇದು ಆರ್ಥಿಕವಾಗಿ ಅಬಲರಾದವರ ಏಳ್ಗೆಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಈ ಬಾರಿ ಸಪ್ತಾಹದ ಧ್ಯೇಯ ಕೊರೊನಾ ಸೋಂಕು – ಆತ್ಮನಿರ್ಭರ ಭಾರತ – ಸಹಕಾರ ಸಂಸ್ಥೆಗಳು ಎಂಬುದಾಗಿದೆ. ನಾಗರಿಕರಿಗೆ ಸ್ಪಂದಿಸಿ ಆರ್ಥಿಕ ಬಲ ತುಂಬುವುದೇ ನಮ್ಮ ಗುರಿ ಎಂದರು.
ಕೃಷಿ ಸಾಲ ವಿತರಣೆ, ಹಾಲು ಸಂಗ್ರಹಣೆ ಮತ್ತು ಮಾರಾಟ, ಕೃಷಿ ಉತ್ಪನ್ನಗಳ ಖರೀದಿ ಹಾಗೂ ಕೃಷಿ ಮತ್ತು ಕೃಷಿಯೇತರ ಸಾಲ ಸೌಲಭ್ಯಗಳನ್ನು ಸದಸ್ಯರಿಗೆ ಕಲ್ಪಿಸಲಾಗಿದೆ. ಬಡ್ಡಿ ಸಹಾಯಧನಕ್ಕಾಗಿ ಈಗಾಗಲೇ 496.24 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ “ಕೋವಿಡ್ ಸಂದರ್ಭ ಎದುರಾದ ಹಿನ್ನೆಲೆಯಲ್ಲಿ ರೈತರಿಗೆ ಪ್ರಸಕ್ತ ಸಾಲಿನಲ್ಲಿ ಸಾಲ ನೀಡುವುದು ಬಹಳ ಕಷ್ಟ ಎಂದೇ ಅಂದಾಜಿಸಲಾಗಿತ್ತು. ಕಳೆದ ವರ್ಷ ನೀಡಲಾಗಿದ್ದ 13,500 ಕೋಟಿಯಷ್ಟು ಸಾಲವನ್ನೂ ಸಹ ನೀಡಲು ಕಷ್ಟವಾಗಬಹುದು ಎಂಬ ಆತಂಕದ ನಡುವೆಯೂ ನಾವು 24 ಲಕ್ಷ ರೈತರಿಗೆ 14,500 ಕೋಟಿ ರೂಪಾಯಿ ಸಾಲ ವಿತರಣೆ ಗುರಿ ಹಾಕಿಕೊಂಡೆವು. ಅದರನ್ವಯ ಈವರೆಗೆ ಅಂದರೆ ನವೆಂಬರ್ 14ರವರೆಗೆ 15,22,076 ರೈತರಿಗೆ 9945.82 ಕೋಟಿ ರೂಪಾಯಿ ಸಾಲ ನೀಡಿದ್ದೇವೆ” ಎಂದರು.
ಈ ಸಂದರ್ಭ ಸಹಕಾರ ಕ್ಷೇತ್ರದಲ್ಲಿನ 10 ಮಂದಿ ಸಾಧಕರಿಗೆ “ಸಹಕಾರ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಂದಾಯ ಸಚಿವ ಆರ್. ಅಶೋಕ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮತ್ತು ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಭಾಗವಹಿಸಿದ್ದರು.