ಮೈಸೂರು: ಎಲ್ಲೋ ಜಲೀಲ ನೆನಪಾಗಿರಬೇಕು ಅದಕ್ಕೆ ಪೇಟೆ ರೌಡಿಗೆ ನನ್ನನ್ನು ಹೋಲಿಕೆ ಮಾಡಿದ್ದಾರೆ. ಅವರ ಹೇಳಿಕೆಗೆ ಅಷ್ಟೇನು ಮಹತ್ವ ಕೊಡಬೇಕಿಲ್ಲ ಎಂದು ಸಂಸದೆ ಸುಮಲತಾ ವಿರುದ್ಧ ಸಂಸದ ಪ್ರತಾಪಸಿಂಹ ಟೀಕಾಪ್ರಹಾರ ನಡೆಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪಸಿಂಹ, ಅವರಿಗೆ ನಾಗರಹಾವು ಸಿನಿಮಾದ ಜಲೀಲ ಅವರ ಡೈಲಾಗ್ ನೆನಪಾಗಿ ಹೇಳಿದ್ದಾರೆ. ಹೀಗಾಗಿ ಯಾರೂ ಕೂಡ ಅದನ್ನು ಗಂಭೀರವಾಗಿ ಪರಿಣಿಸಬೇಡಿ ಅವರ ಹೇಳಿಕೆ ಬಗ್ಗೆ ನನಗ್ಯಾಕೋ ನಂಬಿಕೆ ಇಲ್ಲ. ಅವರು ಸಿನಿಮಾ ಜಗತ್ತು, ಬಣ್ಣದ ಲೋಕದಿಂದ ಬಂದವರು ಎಂದು ಕುಟುಕಿದರು.
ಪ್ರಜಾಪ್ರಭುತ್ವದಲ್ಲಿ ಪಾಳೇಗಾರಿಕೆ ಮನಸ್ಥಿತಿ ನಡೆಯುವುದಿಲ್ಲ. ನಾನು, ನನ್ನ ಕುಟುಂಬ ಅನ್ನುವ ಪಾಳೇಗಾರಿಕೆಗೆ ಇಲ್ಲಿ ಜಾಗವಿಲ್ಲ ಎಂದು ಸುಮಲತಾ ಅವರು ಅಂಬರೀಷ್ ಇದ್ದಾಗ ಯಾರು ಬಾಲ ಬಿಚ್ಚುತ್ತಿರಲಿಲ್ಲ ಎಂಬ ಮಾತಿಗೂ ತಿರುಗೇಟು ನೀಡಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಆಗಬಹುದು. ಇಲ್ಲಿ ಪಾಳೆಗಾರಿಕೆ ಸಂಸ್ಕೃತಿಗೆ ಅವಕಾಶ ಇಲ್ಲ. ನಾನು ಯಾವ ಸ್ಟಾರ್ ಅಲ್ಲ. ನನಗೆ ಯಾವ ಅಭಿಮಾನಿಯೂ ಬಂದು ವೋಟು ಹಾಕಿಲ್ಲ. ನನ್ನ ಕೆಲಸವೇ ನನ್ನನ್ನು ಕಾಯುವುದು. ಹಾಗಾಗಿ, ನನಗೆ ಕೆಲಸದ ಮೇಲೆ ನಂಬಿಕೆ. ನಾನು ಬಸವಣ್ಣ ಅವರ ಕಾಯಕನಿಷ್ಠೆಯಲ್ಲಿ ನಂಬಿಕೆ ಇಟ್ಟವನು. ವೃತಾ ಹೇಳಿಕೆ ಕೊಟ್ಟು ಸಮಯ ವ್ಯರ್ಥ ಮಾಡುವುದಿಲ್ಲ ಎಂದರು.
10 ಪಥದ ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಮಂಡ್ಯ ಜನರು ಅಡ್ಡ ಹಾಕಿ ನನ್ನನ್ನು ಕೇಳಿದರು. ಆಗ ನಾನು ಅಂಡರ್ ಪಾಸ್ ಹಾಗೂ ಫ್ಲೈಓವರ್ ಮಾಡಿಸಿಕೊಡುವ ಭರವಸೆ ನೀಡಿದೆ. ಇದರಿಂದ ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಯ ಜನರಿಗೆ ಅನುಕೂಲ ಆಗಲಿದೆ. ಅದಕ್ಕಾಗಿ ನಾನು ಭರವಸೆ ಕೊಟ್ಟೆ ವಿನಾ ಬೇರೆ ಏನು ಮಾತನಾಡಿಲ್ಲ ಎಂದು ಹೇಳಿದರು.
ಆದರೆ, ಯಾವ ರಸ್ತೆ ಯಾರ ವ್ಯಾಪ್ತಿಗೆ ಬರುತ್ತದೆ ಎಂಬ ಕನಿಷ್ಠ ಜ್ಞಾನ ಇದ್ದರೆ ಈ ರೀತಿಯ ಹೇಳಿಕೆ ನಿಲ್ಲುತ್ತವೆ. 10 ಪಥದ ಹೆದ್ದಾರಿ ಅನುಕೂಲ ಮಾಡೋದು ಉದ್ದೇಶ. ಅದನ್ನು ಬಿಟ್ಟು ಬೇರೆನು ನನಗೆ ಗೊತ್ತಿಲ್ಲ ಎಂದರು.