ಬೆಂಗಳೂರು: ಡಿಸೆಂಬರ್ 7ರಿಂದ 15ರವರೆಗೆ ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ಬೆಂಗಳೂರಲ್ಲಿ ನಡೆಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಮಧುಸ್ವಾಮಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸಿ- ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗುತ್ತದೆ. ಒಂದು ವಾರದಲ್ಲಿ ಸಮಿತಿ ರಚನೆ ಮಾಡಿ, ಸಮಿತಿ ವರದಿ ಆಧರಿಸಿ ಮೀಸಲು ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರದ ಹೆಸರು ಬದಲಾವಣೆ
ಮರಾಠ ಅಭಿವೃದ್ಧಿ ಪ್ರಾಧಿಕಾರದ ಹೆಸರು ಬದಲಾವಣೆಗೆ ನಿರ್ಧರಿಸಿದ್ದು, ಇನ್ನು ಮುಂದೆ ‘ಮರಾಠ ಸಮುದಾಯ ನಿಗಮ’ ಎಂದು ಬದಲಾವಣೆಯಾಗಲಿದೆ. ಇನ್ನು ಮರಾಠ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಪ್ರಾಧಿಕಾರ ಮಾಡಬೇಕಾದರೆ ಕಾನೂನು ಮಾಡಬೇಕು. ಆದರೆ ನಿಗಮಕ್ಕೆ ಸರ್ಕಾರವೇ ನಿರ್ಧಾರ ಕೈಗೊಳ್ಳಬಹುದು. ಹಣ ಎಷ್ಟು ನಿಗದಿ ಮಾಡಬೇಕು ಎಂಬುದು ಇನ್ನೂ ಚರ್ಚೆಯಾಗಿಲ್ಲ. ಒಂದು ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಯಾಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೂ ಅಭಿವೃದ್ಧಿಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಪ್ರವಾಹ ಪೀಡಿತ ಜಿಲ್ಲೆಗಳಿಗೆ 1,000 ಕೋಟಿ ರೂ. ಬಿಡುಗಡೆ ಮಾಡಿ ಪರಿಹಾರ ಕಾಮಗಾರಿ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಕೃಷ್ಣಾ ಭಾಗ್ಯ ಜಲ ನಿಗಮ, ಕಾವೇರಿ ಅಭಿವೃದ್ಧಿ ನಿಗಮ ಮತ್ತು ವಿಶ್ವೇಶ್ವರಯ್ಯ ಅಭಿವೃದ್ಧಿ ನಿಗಮಕ್ಕೆ ಸಾಲ ಪಡೆಯಲು ಅನುಮತಿ ನೀಡಲಾಗಿದೆ. ಹೊಸಪೇಟೆಯಲ್ಲಿ 13 ಕೋಟಿ ರೂ. ಅಂದಾಜು ವೆಚ್ಚದಲ್ಕಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದರು.
ಸರ್ಕಾರಿ ನೌಕರರ ಮೇಲೆ ಕ್ರಮ ಜರುಗಿಸಲು ತಿದ್ದುಪಡಿ
ಈ ಸಾಲಿನಲ್ಲಿ 21 ಸಾರ್ವತ್ರಿಕ ರಜೆ ಮತ್ತು19 ನಿರ್ಬಂಧಿತ ರಜೆ ನೀಡಲು ಅನುಮೋದನೆ ಸಿಕ್ಕಿದ್ದು, ಲೋಕಸೇವಾ ಆಯೋಗದ ಅನುಮತಿ ಇಲ್ಲದೆ ಸರ್ಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳಲು ನಿಯಮಾವಳಿ ತಿದ್ದುಪಡಿ ಮಾಡಲಾಗುತ್ತದೆ ಎಂದು ತಿಳಿಸಿದರು.