ಹುಬ್ಬಳ್ಳಿ: ಕಾರುಗಳ ನಡುವೆ ಸಂಭವಿಸಿದ ರಸ್ತೆ ಅಪಾಘಾತದಲ್ಲಿ ಇಬ್ಬರು ಮೃತಪಟ್ಟಿದ್ದು ಮೂವರು ಗಾಯಗೊಂಡಿರುವುದು ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ಬಳಿ ನಡೆದಿದೆ.
ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊರಟಿದ್ದ ಕಾರು, ಗದಗದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಮೃತಪಟ್ಟವರಲ್ಲಿ ಒಬ್ಬರು ಧಾರವಾಡ ಮೂಲದ ಸ್ಮಿತಾ ಕಟ್ಟಿ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಗುರುತು ಪತ್ತೆ ಆಗಿಲ್ಲ.
ಒಂದು ಕಾರು ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸೇರಿದ್ದಾಗಿದೆ. ಇನ್ನೊಂದು ಕಾರಿನ ವಿವರ ತಿಳಿದುಬಂದಿಲ್ಲ. ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಗಂಭೀರ ಗಾಯಗೊಂಡ ಆ ಮೂವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಮತ್ತು ಗಾಯಾಳುಗಳೆಲ್ಲರೂ ಒಂದೇ ಕಾರಿನಲ್ಲಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.