ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಯಲ್ಲಿ ನಡೆದಿದೆ.

ಮೈಸೂರಿನ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ ಸಂತೆಮರಳಿ ಬಳಿಯ ತಮರವಾಡಿ ಗ್ರಾಮದ ಮೋಹನ್ ಕುಮಾರ್(21) ಹಾಗೂ ಮೈಸೂರಿನ ಜಯಪುರ ಬಳಿಯ ಕೆಳಹಳ್ಳಿ ಗ್ರಾಮದ ರವಿಚಂದ್ರ (21) ಎಂಬುವವರೆ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕರು.
ಈ ಇಬ್ಬರು ಐಟಿಐ ಮುಗಿಸಿ ಕೇನ್ಸ್ ಟೆಕ್ನಾಲಜಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ್ದರು, ಇವರು ತಮ್ಮ ಮತ್ತೊಬ್ಬ ಸ್ನೇಹಿತ ವಿಕಾಸ್ ಜತೆಗೂಡಿ ಬಲಮುರಿ ಪ್ರವಾಸಿ ತಾಣಕ್ಕೆ ಹೋಗಿದ್ದರು. ಆದರೆ, ಈಜು ಬಾರದೆ ಇದ್ದಿದ್ದರಿಂದ ಇಬ್ಬರು ನೀರುಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈಜು ಬಾರದೆ ನೀರಲ್ಲಿ ಮುಳಗಿರುವ ಬಗ್ಗೆ ವಿಕಾಸ್ ಸಮೀಪದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೂಲಕ ಕೆ.ಆರ್.ಸಾಗರ ಪೊಲೀಸ್ ಠಾಣೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸರ್ಕಲ್ ಇನ್ಸ್‌ಪೇಕ್ಟರ್ ವಿವೇಕಾನಂದ, ಎಸ್‌ಐ ರಮೇಶ್ ಕರ್ಕಿಕಟ್ಟೆ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಸ್ಥಳೀಯ ನುರಿತ ಈಜುಗಾರರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿಯೊಂದಿಗೆ ಕಾರ್ಯಾ ಚರಣೆ ನಡೆಸಿ ಮೋಹನ್ ಕುಮಾರ್, ರವಿಚಂದ್ರ ಅವರ ಪಾರ್ಥಿವ ಶರೀರವನ್ನು ಹೊರತೆಗೆದಿದ್ದಾರೆ.
ಬಳಿಕ ಇಬ್ಬರ ಪಾರ್ಥಿವ ಶರೀರವನ್ನು ಮೈಸೂರು ಕೆ.ಆರ್. ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದ್ದು, ಮೃತದೇಹ ಪರೀಕ್ಷೆ ಬಳಿಕ ಸಂಬಂಧಿಕರಿಗೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Related










