ನ್ಯೂಡೆಲ್ಲಿ: ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಗುಜರಾತ್ ಮತ್ತು ದೆಹಲಿಯಲ್ಲಿ ಸೋಂಕು ನಿಯಂತ್ರಣಕ್ಕೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದ್ದು, ಈ ಸಂಬಂಧ ಎರಡೂ ರಾಜ್ಯಗಳಿಂದಲೂ ಎರಡು ದಿನದೊಳಗೆ ವರದಿ ಸಲ್ಲಿಸುವಂತೆ ಕೇಳಿದೆ.
ಇನ್ನು ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರದಿಂದ ಅಗತ್ಯ ಸಹಾಯ ದೊರಕಿದೆಯೇ ಎಂಬುದರ ಬಗ್ಗೆಯೂ ವರದಿ ನೀಡುವಂತೆ ತಿಳಿಸಿದೆ. ಜತೆಗೆ ಎಲ್ಲಾ ರಾಜ್ಯಗಳು ಕೋವಿಡ್ ನಿಯಂತ್ರಣದ ಬಗ್ಗೆ ಅನುಸರಿಸುತ್ತಿರುವ ಕ್ರಮಗಳ ವರದಿಯನ್ನು ನೀಡುವಂತೆ ಕೇಳಿದೆ.
ಹಲವಾರು ರಾಜ್ಯಗಳು, ವಿಶೇಷವಾಗಿ ದೇಶದ ಉತ್ತರ ಭಾಗದಲ್ಲಿ, ಕೊರೊನಾ ಎರಡನೇ ಅಲೆ ಶುರುವಾಗಿದ್ದು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಸುಪ್ರೀಂ ಕೋರ್ಟ್ ಗೆ ವರದಿ ನೀಡಿವೆ. ದೇಶದ ಕೋವಿಡ್‌ನಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಮತ್ತು ಡಿಸೆಂಬರ್‌ನಲ್ಲಿಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿರುವುದಾಗಿ ನ್ಯಾಯಾಲಯ ಹೇಳಿದೆ.
ನ್ಯೂಡೆಲ್ಲಿಯಲ್ಲಿ ನವೆಂಬರ್‌ನಲ್ಲೇ ಸೋಂಕು ಹೆಚ್ಚಾಗಿದ್ದು, ಇಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಈ ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ನೀವು ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಎಸ್.ರೆಡ್ಡಿ ಮತ್ತು ಎಂ.ಆರ್.ಶಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ದೆಹಲಿ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರಿಗೆ ತಿಳಿಸಿದೆ.
ಕೋವಿಡ್ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಹಾಗೂ ಸೋಂಕಿನಿಂದ ಮೃತಪಟ್ಟವರಿಗೆ ಗೌರವಯುತ ಅಂತ್ಯಕ್ರಿಯೆ ಆಗುತ್ತಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 27ಕ್ಕೆ ಮುಂದೂಡಿತು.