ನಾಳೆ ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯ ವ್ಯತ್ಯಾಸ ತಿಳಿಯಲು ಸಾರಿಗೆ ನೌಕರರಿಂದ NWKRTC ಎಂಡಿ ಭೇಟಿ
ಹಿಂಬಾಕಿಯಲ್ಲಿ ನೌಕರರಿಗೆ ಆಗಿರುವ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಲು ಡಿಪೋಗಳಿಗೆ ಹೋಗುವ ನೌಕರರಿಗೆ ಸಿಬ್ಬಂದಿಗಳು ಮಾಹಿತಿ ನೀಡಬೇಕು ಎಂದು ಸೂಚನೆ ನೀಡುವಂತೆ ಮನವಿ ಮಾಡಲು ಕೇಂದ್ರ ಕಚೇರಿಗೇ ಹೋಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಆಗಬೇಕೆಂದು ಕೆಲ ನೌಕರರು ನಿರ್ಧರಿಸಿದ್ದಾರೆ.

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಗೆ ನಾಳೆ ಸೋಮವಾರ ಬೆಳಗ್ಗೆ 11.30ಕ್ಕೆ ಸಂಸ್ಥೆಯ ನೌಕರರು ಭೇಟಿ ನೀಡುತ್ತಿದ್ದು, ಕಚೇರಿಯಲ್ಲಿ ಹಿಂಬಾಕಿ ವ್ಯತ್ಯಾಸದ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದು ಆಗಿರುವ ದೋಷದ ಬಗ್ಗೆ ಸ್ಪಷ್ಟಪಡಿಸಲು ಸಂಬಂಧಿಸಿದ ಸಿಬ್ಬಂದಿಗಳಿಗೆ ತಾಕೀತು ಮಾಡುವಂತೆ ಮನವಿ ಮಾಡಲಿದ್ದಾರೆ.
ಹೀಗಾಗಿ ಈ ಭೇಟಿಯ ಸಮಯದಲ್ಲಿ ವಾರದ ರಜೆ ಹಾಗೂ ರಜೆ ಇದ್ದವರು ಬರಬೇಕೆಂದು ನೌಕರರು ಮನವಿ ಮಾಡಿದ್ದಾರೆ.
ಆಗಿರುವುದೇನು?: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಇತ್ತೀಚೆಗೆ ಅವರವರ ಬ್ಯಾಂಕ್ ಖಾತೆಗಳಿಗೆ ಹಾಕಿರುವ ಶೇ.15ರಷ್ಟು ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ನೌಕರರು ಅಸಮಾಧಾನಗೊಂಡಿದ್ದಾರೆ.
ಅಲ್ಲದೆ, ಈ ವ್ಯತ್ಯಾಸ ಆಗಿರುವುದರ ಬಗ್ಗೆ ಸ್ಪಷ್ಟನೆಕೊಡಿ ಎಂದು ಡಿಪೋಗಳಲ್ಲಿನ ಲೆಕ್ಕಪತ್ರ ಶಾಖೆ (ADM) ವಿಭಾಗದಲ್ಲಿ ನೌಕರರು ಕೇಳುತ್ತಿದ್ದಾರೆ. ಆದರೆ, ಇಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಅವರು ಸರಿಯಾದ ಲೆಕ್ಕ ಕೊಡದೆ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿ ಈ ಹಿಂಬಾಕಿಯಲ್ಲಿ ನೌಕರರಿಗೆ ಆಗಿರುವ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಲು ಡಿಪೋಗಳಿಗೆ ಹೋಗುವ ನೌಕರರಿಗೆ ಸಿಬ್ಬಂದಿಗಳು ಮಾಹಿತಿ ನೀಡಬೇಕು ಎಂದು ಸೂಚನೆ ನೀಡುವಂತೆ ಮನವಿ ಮಾಡಲು ಕೇಂದ್ರ ಕಚೇರಿಗೇ ಹೋಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಆಗಬೇಕೆಂದು ಕೆಲ ನೌಕರರು ನಿರ್ಧರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಜೂ.1ರ ಸೋಮವಾರ ಬೆಳಗ್ಗೆ 11.30ಗಂಟೆಗೆ ಕೇಂದ್ರ ಕಚೇರಿಗೆ ಬನ್ನಿ ಎಂದು ವಿನಂತಿ ಮಾಡಿದ್ದಾರೆ.
ಇನ್ನು ಬಿಎಂಟಿಸಿಯ, ಕೆಎಸ್‌ಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ನೌಕರರಿಗೂ ಈ ಹಿಂಬಾಕಿ ನೀಡುವಲ್ಲಿ ಭಾರಿ ವ್ಯತ್ಯಾಸವಾಗಿದೆ ಎಂದು ಹೇಳಲಾಗುತ್ತಿದ್ದು, ಒಂದೇ ಬ್ಯಾಚ್‌ನಲ್ಲಿ ಸೇವೆಗೆ ಸೇರಿರುವವರಿಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹಿಂಬಾಕಿ ಬಂದಿದೆ. ನಾವು ಇಬ್ಬರು ಯಾವುದೇ ಸಮಸ್ಯೆ ಇಲ್ಲದೆ ಡ್ಯೂಟಿ ಮಾಡುತ್ತಿದ್ದೇವೆ. ಆದರೆ ನಮ್ಮಿಬ್ಬರಲ್ಲೇ ಹಿಂಬಾಕಿ ಕೊಡುವಲ್ಲಿ ಸಾವಿರಾರು ರೂ.ಗಳ ವ್ಯತ್ಯಾಸವಿದೆ ಎಂದು ನೌಕರರು ಒಬ್ಬರಿಗೊಬ್ಬರು ಹೇಳುತ್ತಿದ್ದಾರೆ.
ಅಲ್ಲದೆ ಈ ಬಗ್ಗೆ ಅಂಬಂಧಪಟ್ಟ ಡಿಪೋ ಎಡಿಎಂ ವಿಭಾಗದಲ್ಲಿ ವಿಚಾರಿಸಲು ಹೋದರೆ ಅಲ್ಲಿ ಸರಿಯಾದ ಉತ್ತರ ಸಿಗುತ್ತಿಲ್ಲ ಎಂಬ ಆರೋಪವನ್ನು ನಾಲ್ಕೂ ನಿಗಮಗಳ ನೌಕರರು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ NWKRTC ಎಂಡಿ ಅವರನ್ನು ಭೇಟಿ ಮಾಡಿ ಈ ಗೊಂದಲ ಸರಿ ಪಡಿಸಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದ್ದಾರೆ.
Related









