ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ವಿಧಾನಸಭೆಯ ಕಲಾಪವನ್ನು ಇದೇ ಡಿಸೆಂಬರ್ 10, ಗುರುವಾರಕ್ಕೆ ಅಂತ್ಯಗೊಳಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ಇಂದು ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಕಲಾಪ ಸಲಹಾ ಸಮಿತಿ ಮಂಗಳವಾರ ತೀರ್ಮಾನಿಸಿದ್ದು, ನಿನ್ನೆಯಿಂದ ಆರಂಭವಾಗಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೆ ಕಲಾಪದ ಮೊದಲ ದಿನವೇ ಸದನದಲ್ಲಿ ಖುರ್ಚಿಗಳು ಖಾಲಿ ಖಾಲಿಯಾಗಿದ್ದವು. ಹಲವು ಸಚಿವರು, ಆಡಳಿತ ಹಾಗೂ ವಿಪಕ್ಷಗಳ ಅನೇಕ ಸದಸ್ಯರು ಸದನಕ್ಕೆ ಗೈರಾಗಿದ್ದರು.
ಡಿಸೆಂಬರ್ 15ರ ವರೆಗೆ ಅಧಿವೇಶನ ನಡೆಯಬೇಕಿತ್ತು. ಆದರೆ ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಅಧಿವೇಶನವನ್ನು ನಾಲ್ಕೇ ದಿನಕ್ಕೆ ಮುಕ್ತಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.
ಒಟ್ಟಾರೆ ಕೊರೊನಾ ಜತೆಗೆ ಜಿಟಿಜಿಟಿ ಮಳೆ ಇನ್ನೊಂದೆಡೆ ಕೊರೆವ ಚಳಿ ಇರುವುದರಿಂದ ಸದನದ ಕಲಾಪಕ್ಕೆ ಬಹುತೇಕ ಸಚಿವರ ಸಹಿತ ವಿಪಕ್ಷ ಸೇರು ಹಲವು ಶಾಸಕರು ಗೈರಾಗುತ್ತಿರುವುದರಿಂದ ಕಲಾಪವನ್ನು ಇನ್ನು ಐದು ದಿನ ಬಾಕಿ ಇರುವಂತೆಯೇ ಅಂತ್ಯಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.