ಬೆಂಗಳೂರು: ರಾಜ್ಯ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ, ಸಾರಿಗೆ ನೌಕರರ ಒಕ್ಕೂಟ, ವಿವಿಧ ರೈತಪರ, ಕನ್ನಡಪರ ಮತ್ತು ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ, ಡಿ10ರಂದು ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ಬೃಹತ್ ಕಾಲ್ನಡಿಗೆ ಮೂಲಕ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ.
ಹೊಸಪೇಟೆ ವಿಭಾಗದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಜ್ದೂರೆ ಸಂಘ, ಸಾರಿಗೆ ನೌಕರರು ಸರ್ಕಾರಿ ನೌಕರರಾಗುವ ಹೋರಾಟದ ಒಕ್ಕೂಟ ವಿವಿಧ ಮಠಾಧೀಶರು, ಗಣ್ಯರ ನೇತೃತ್ವದಲ್ಲಿ ಈ ವಿಧಾನಸೌಧ ಚಲೋ ಆಯೋಜಿಸಿದ್ದು ತಮ್ಮ ಬೇಡಿಕೆ ಈಡೇರುವವರೆಗೆ ನಿರಂತರ ಹೋರಾಟ ನಡೆಸಲು ಸಾರಿಗೆ ನೌಕರರು ಸಜ್ಜಾಗಿದ್ದಾರೆ ಎಂದು ಸಾರಿಗೆ ನೌಕರರ ಸಂಘದ ಪ್ರಮುಖರಾದ ಸುಧಾಕರ್ ರೆಡ್ಡಿ ತಿಳಿಸಿದ್ದಾರೆ.
ವಿಧಾನಸೌಧ ಚಲೋ ಅಂದು ಬೆಳಗ್ಗೆ 10ಗಂಟೆಗೆ ಆರಂಭವಾಗಲಿದ್ದು, ಹೋರಾಟದಲ್ಲಿ 10ರಿಂದ 15 ಸಾವಿರ ನೌಕರರು, ನೌಕರರ ಕುಟುಂಬದ ಸದಸ್ಯರ ಜತೆಗೆ ಸ್ಫಟಿಕಪುರಿ ಮಠಾಧೀಶರಾದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಸೇರಿ ಹಲವು ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ವಿಜಯಪಥ (ಡಿಜಿಟಲ್ ಮೀಡಿಯಾ)ಕ್ಕೆ ತಿಳಿಸಿದರು.
ಸಾರಿಗೆ ನೌಕರರನ್ನು ಸರ್ಕಾರ ಕರ್ತವ್ಯದ ಹೊಣೆಯ ಸಂಕೋಲೆಯಿಂದ ಕಟ್ಟಿಹಾಕಿದ್ದು, ತಮ್ಮ ಈ ಹೋರಾಟದಲ್ಲಿ ಪಾಲ್ಗೊಳ್ಳಲು ಬಹುತೇಕ ಸಿಬ್ಬಂದಿಗೆ ಆಗಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ನೌಕರರ ಕುಟುಂಬದ ಸದಸ್ಯರು ಹಾಗೂ ಸಮಾನ ಮನಸ್ಕ ಹೋರಾಟಗಾರರು ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಈ ಹೊರಾಟ ಬೆಂಬಲಿಸಲು ನಮ್ಮೊಂದಿಗೆ ಪಾಲ್ಗೊಳ್ಳವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸುವಂತೆ, ವಿವಿಧ ಸಾರಿಗೆ ನೌಕರರ ಸಂಘಟನೆಗಳು ಹಾಗೂ ಸಾರಿಗೆ ನೌಕರರ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.
ಸಾರಿಗೆ ನೌಕರರಿಗೆ ಕೇಂದ್ರ ಕಚೇರಿಯ ಸೂಚನೆ