ಬೆಂಗಳೂರು: ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ ಪ್ರತಿಭಟನೆಯ ಸ್ವರೂಪದ ಬಗ್ಗೆ ಎಐಟಿಯುಸಿ ಸಂಘಟನೆಯ ಅಧ್ಯಕ್ಷ ಅನಂತ್ ಸುಬ್ಬರಾವ್ ವಿರೋಧ ವ್ಯಕ್ತಪಡಿಸಿದ್ದಾರೆ.
ಮುಷ್ಕರ ಕುರಿತಾಗಿ ಬೆಂಗಳೂರಿನಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸುಬ್ಬರಾವ್ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ್ದು,
ಈ ಮೂಲಕ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರ ಸಂಘಟನೆಗಳ ಭಿನ್ನಮತ ತೀವ್ರಗೊಂಡಿದೆ. ನೋಟಿಸ್ ಕೊಡದೆ ಪ್ರತಿಭಟನೆ ಮಾಡ್ತಾರೆ, ಎಷ್ಟು ದಿನ ಮಾಡುತ್ತಾರೆ ನೊಡೋಣ, ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ ಎಂದು ಸುಬ್ಬರಾವ್ ಕೋಡಿಹಳ್ಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಬಿಎಸ್ ಯಡಿಯೂರಪ್ಪ ನನ್ನ ಜೊತೆ ಮಾತನಾಡಿದ್ದಾರೆ. ರಾತ್ರೋ ರಾತ್ರಿ ಬಂದ್ ಕರೆ ಕೊಡುವುದು ಸರಿಯಾ? ಎಂದು ಪ್ರಶ್ನಿಸಿದ ಅವರು, ಯಾರೋ ಮೂರನೆಯವರು ಬಂದ್ಗೆ ಕರೆ ಕೊಟ್ಟಿದ್ದಾರೆ. ಎಂದು ಹೇಳಿರುವುದಾಗಿ ತಿಳಿಸಿದರು.
ಇನ್ನು ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾವಿಲ್ಲಿ ಬಂದಿದ್ದೇವೆ. ಸರ್ಕಾರ ಭರವಸೆ ಕೊಟ್ಟರೆ ಬಸ್ ಓಡಿಸಲು ಹೇಳುತ್ತೇವೆ. ನೌಕರರ ಸಂಬಳ ಹೆಚ್ಚು ಮಾಡುವ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಮಾಡಲಿ ಎಂದು ಇದೇ ವೇಳೆ ಒತ್ತಾಯಿಸಿದರು.
ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಹಾಗೂ ಕೋವಿಡ್ನಿಂದ ಮೃತಪಟ್ಟವರಿಗೆ 30 ಲಕ್ಷ ರೂ. ಪರಿಹಾರ ಸೇರಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ.