NEWSಕೃಷಿನಮ್ಮಜಿಲ್ಲೆ

ತಿ.ನರಸೀಪುರ: ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ ತಹಸೀಲ್ದಾರ್‌ಗೆ ಮನವಿ

ತಹಸೀಲ್ದಾರ್ ಸಿ.ಜೆ.ಸುರೇಶ್ ಆಚಾರ್ ಅವರನ್ನು ಭೇಟಿ ಮಾಡಿ ರೈತ ಮುಖಂಡರು ಟಾಟಾ ಪವರ್ ಕಂಪನಿಗೆ ಪರವಾನಿಗೆ ನೀಡಬಾರದೆಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಆಕ್ಷೇಪಣೆ ಪತ್ರ ತಲುಪಿಸುವಂತೆ ಮನವಿ ಮಾಡಿದರು.

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಯ 19 ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಿಗೆ ಕೋರಿ ಟಾಟಾ ಪವರ್ ಕಂಪನಿ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ಆಕ್ಷೇಪಣೆ ರಾಜ್ಯ ಕಬ್ಬು ಬೆಳೆಗಾರ ಸಂಘದ ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿ ಗ್ರಾಮಾಂತರ ಘಟಕ ಒತ್ತಾಯಿಸಿ ಪ್ರತಿಭಟನೆ ನಡೆಸಿತು.

ಬನ್ನೂರು ಸಂತೆಮಾಳದ ಎಪಿಎಂಸಿ ಆವರಣದಲ್ಲಿರುವ ನಾಡ ಕಚೇರಿಯಲ್ಲಿ ಇಂದು ಬೆಳಗ್ಗೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಜಮಾಯಿಸಿದ ರೈತರು ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿದರು.

ಈ ವೇಳೆ ಮಾತನಾಡಿದ ಅತ್ತಹಳ್ಳಿ ದೇವರಾಜ್, ಬನ್ನೂರು ಹೋಬಳಿ ಗ್ರಾಮಾಂತರ ಘಟಕದ ವತಿಯಿಂದ ಆಕ್ಷೇಪಣೆ ಸಲ್ಲಿಸುತ್ತಿದ್ದು, ಈ ಆಕ್ಷೇಪಣೆಯನ್ನು ಪರಿಗಣಿಸಿ ಟಾಟಾ ಪವರ್ ಕಂಪನಿಯು ವಿದ್ಯುತ್ ಕಾಯ್ದೆ 2003 ರ ಕಲಂ 14 , ಸೆಕ್ಷನ್ 6ರ ಅಡಿಯಲ್ಲಿ ಸಲ್ಲಿಸಿರುವ ಕರ್ನಾಟಕ ರಾಜ್ಯದ 19 ಕಂದಾಯ ಜಿಲ್ಲೆಗಳಲ್ಲಿ ಈಗ ಇರುವ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಮಾನಾಂತರವಾಗಿ ವಿದ್ಯುತ್ ವಿತರಣಾ ಲೈಸನ್ಸ್ ಕೋರಿರುವ ಅರ್ಜಿಗಳನ್ನು ತಿರಸ್ಕರಿಸುವಂತೆ ಆಗ್ರಹಿಸಿದರು.

ರಾಜ್ಯದಲ್ಲಿ ಸರ್ಕಾರಿ ವಿದ್ಯುತ್ ಸರಬರಾಜು ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಖಾಸಗಿ ಕಂಪನಿಗಳಿಗೆ ಲೈಸನ್ಸ್ ನೀಡುವ ಮೂಲಕ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಗೊಳಿಸಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.

ಇನ್ನು ಟಾಟಾ ಹಾಗೂ ಇನ್ನಿತರೆ ಯಾವುದೇ ವಿದ್ಯುತ್ ಪವರ್ ಕಂಪನಿ ವಿದ್ಯುತ್ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ರೈತರು ಹಾಗೂ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತೇವೆ, ವಿದ್ಯುತ್ ಕ್ಷೇತ್ರದ ಖಾಸಗೀಕರಣದಿಂದ ವಿದ್ಯುತ್ ದರ ಹೆಚ್ಚಳ ಆಗುವ ಸಾಧ್ಯತೆ ಇದ್ದು, ಗೃಹ ಜ್ಯೋತಿ ಯೋಜನೆ, ರೈತರ ಕೃಷಿ ಪಂಪ್ ಸೆಟ್‌ಗಳಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಹಾಗೂ ವಿವಿಧ ಸಹಾಯ ಧನಕ್ಕೆ ಪೆಟ್ಟು ಬೀಳುವ ಆತಂಕವಿದೆ ಎಂದರು.

ಅಲ್ಲದೆ ಖಾಸಗೀಕರಣದಿಂದ ಗ್ರಾಮೀಣ ಪ್ರದೇಶಗಳ ಜನರ ನಿರ್ಲಕ್ಷ್ಯ, ಉದ್ಯೋಗ ನೇಮಕಾತಿಗಳಲ್ಲಿ ಮೀಸಲಾತಿ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ, ಅಲ್ಲದೆ ಸರ್ಕಾರಿ ಉದ್ಯೋಗಗಳ ಭದ್ರತೆಗೆ ಅಪಾಯ ಉಂಟಾಗುತ್ತದೆ, ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ಖಾಸಗಿ ಕಂಪನಿಗಳ ಪಾಲಾಗುವ ಸಾಧ್ಯತೆ ಇದ್ದು, ಮೂಲಭೂತ ಸೇವೆಯೇ ವ್ಯಾಪಾರದ ವಸ್ತುವಾಗುವ ಭೀತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದ ಕೃಷಿಕರ ಹಾಗೂ ಸಾಮಾನ್ಯ ಜನರ ಹಿತದೃಷ್ಟಿಯಿಂದ ಟಾಟಾ ವಿದ್ಯುತ್ ಕಂಪನಿಗೆ ಹಾಗೂ ಇನ್ನಿತರೆ ಯಾವುದೇ ವಿದ್ಯುತ್ ಕಂಪನಿಗೆ ಪರವಾನಿಗೆ ನೀಡಬಾರದು ಹಾಗೂ ವಿದ್ಯುತ್ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದ ಅವರು, ವಿದ್ಯುತ್ ಖಾಸಗೀಕಾರಣದಿಂದ ರೈತರಿಗಷ್ಟೇ ಸಮಸ್ಯೆ ಆಗುವುದಿಲ್ಲ ಪ್ರತಿಯೊಂದು ಕುಟುಂಬದ ಮೇಲು ಪ್ರಬಲ ಹೊಡೆತ ಬೀಳುತ್ತದೆ. ಇದು ಒಂದು ದೊಡ್ಡ ಹುನ್ನಾರವಾಗಿದ್ದು, ದೊಡ್ಡ ಮಟ್ಟದಲ್ಲಿ ಸಂಚು ರೂಪಿಸಿ ಸರ್ಕಾರಿ ನೌಕರರ ಬದುಕನ್ನು ನಾಶಮಾಡಿ ಸರ್ವಾಧಿಕಾರಿ ಧೋರಣೆಗೆ ಹೊರಟಿರುವುಡು ಸರಿಯಾದ ಕ್ರಮ ಅಲ್ಲ. ಇದಕ್ಕೆ ಕಡಿವಾಣ ಹಾಕಬೇಕು, ವಿದ್ಯುತ್ ಖಾಸಗೀಕರಣವನ್ನು ಪ್ರತಿಯೊಬ್ಬರು ವಿರೋಧಿಸಬೇಕು ಎಂದು ಕರೆ ನೀಡಿದರು.

ತನ್ನದೇ ಆದ ವಿದ್ಯುತ್ ವಿತರಣಾ ಜಾಲವನ್ನು ಹೊಂದಿರುವುದು, ವಿದ್ಯುತ್ ವಿತರಣಾ ಹಕ್ಕು ಕೇಳುವುದಕ್ಕೆ ಇರುವ ಪೂರ್ವ ಷರತ್ತಾಗಿದ್ದರೂ ಇಂತಹ ಯಾವುದೇ ವಿತರಣಾ ಜಾಲವನ್ನು ಹೊಂದದೇ ಟಾಟಾ ಪವರ್ ಕಂಪನಿಯು ಯಾವುದೇ ಅಗತ್ಯ ಅಂಶಗಳನ್ನು ವಿಶ್ವಾಸಾರ್ಹವಾಗಿ ಹೊಂದಿಲ್ಲದಿರುವುದರಿಂದ ತಿರಸ್ಕಾರಕ್ಕೆ ಯೋಗ್ಯವಾಗಿದೆ. ಹೀಗಾಗಿ ಈ ಎಲ್ಲ ವಿಷಯಗಳನ್ನು ಗಂಭೀಗಿ ಪರಿಶೀಲಿಸಿ ರಾಜ್ಯ ರೈತರ ಹಾಗೂ ಜನ ಸಾಮಾನ್ಯರ ಹಿತದೃಷ್ಟಿಯಿಂದ ಟಾಟಾ ಪವರ್ ಕಂಪನಿಯ ಅರ್ಜಿಗಳನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದರು.

ಇನ್ನು ನಮ್ಮ ಮನವಿಯನ್ನು ಕಡೆಗಣಿಸಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ತೀವ್ರ ವಿಭಿನ್ನ ರೀತಿಯ ಹೋರಾಟದ ಮೂಲಕ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಳಿಕ ತಾಲೂಕು ತಹಸೀಲ್ದಾರ್ ಸಿ.ಜೆ.ಸುರೇಶ್ ಆಚಾರ್ ಅವರನ್ನು ಭೇಟಿ ಮಾಡಿ ರೈತ ಮುಖಂಡರು ಟಾಟಾ ಪವರ್ ಕಂಪನಿಗೆ ಪರವಾನಿಗೆ ನೀಡಬಾರದೆಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಆಕ್ಷೇಪಣೆ ಪತ್ರ ತಲುಪಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಸಿದ್ದರಾಜು ಇದ್ದರು.

ರೈತ ಮುಖಂಡರಾದ ಮೇಗಳಕೊಪ್ಪಲು ಸಿ.ಕುಮಾರ್, ಕುಂತನಹಳ್ಳಿ ಕುಳ್ಳೇಗೌಡ, ಸ್ವಾಮಿ, ಬನ್ನೂರು ವಕೀಲ ರಾಮಲಿಂಗೇಗೌಡ, ಚಾಮನಹಳ್ಳಿ ಕರಿಯಪ್ಪ, ಉಮೇಶ, ಬಸವನಹಳ್ಳಿ ದೇವರಾಜು, ಸುರೇಶ್ ಮುಂತಾದ ರೈತರು ಇದ್ದರು.

Deva
the authorDeva

Leave a Reply

error: Content is protected !!
Latest news
ತಿ.ನರಸೀಪುರ: ಯುವಕನ ಕಿರುಕುಳದಿಂದ ಮದುವೆ ನಿಶ್ಚಯವಾಗಿದ್ದ ಯುವತಿ ಜತೆಗೆ ಅಪ್ಪಅಮ್ಮ ಆತ್ಮಹತ್ಯೆ ತಿ.ನರಸೀಪುರ: ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ ತಹಸೀಲ್ದಾರ್‌ಗೆ ಮನವಿ ಚಾಲನೆಯಲ್ಲಿದ್ದ ಬಸ್‌ನ ಸ್ಟೇರಿಂಗ್‌ ಹಿಡಿದ ಕುಡುಕ- ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್‌ ಡಿಕ್ಕಿ, 11 ಮಂದಿಗೆ ಗಂಭೀರ... KSRTC: ಶೇ.44 ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಗೃಹಜ್ಯೋತಿಯಿಂದ ಸರ್ಕಾರಿ ನೌಕರರ ಹೊರಗಿಡಲು ಸರ್ಕಾರದ ಚಿಂತನೆ ಸರ್ಕಾರಿ ನೌಕರಿ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ವ ಶಕ್ತಿ ಯೋಜನೆಯ ಉಚಿತ ಪ್ರಯಾಣ? KKRTC ನೌಕರರ 14 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಆದೇಶ ಯಾವುದೇ ಸಮಯದಲ್ಲಾದರೂ  ಹೊರಬೀಳಬಹುದು ವಾಯವ್ಯ ಸಾರಿಗೆ ಬಸ್‌- ಬೈಕ್‌ ನಡುವೆ ಡಿಕ್ಕಿ ಹೊತ್ತಿ ಉರಿದ ಬೈಕ್‌- ಸವಾರ ಸಜೀವ ದಹನ ಜೀವನದಲ್ಲಿ ದಿನಂಪ್ರತಿ ಯೋಗಾಭ್ಯಾಸ ಅಳವಡಿಸಿಕೊಳ್ಳಿ: ಡಿಸಿ ಡಾ. ಅನುರಾಧ ಕರೆ ಕೆರೆಗೆ ವೈದ್ಯಕೀಯ ತ್ಯಾಜ್ಯ ಹಾಕಿದ ಆರೋಪ: ಡಾಕ್ಟರ್ ವಿರುದ್ಧ ಎಫ್‌ಐಆರ್ ದಾಖಲು