KSRTC- BMTC ನೂತನ ಎಂಡಿಗಳ ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು: ನೌಕರರ ಬೇಡಿಕೆ ಈಡೇರಿಕೆಗೆ ಸಭೆ ಕರೆಯಲು ಒತ್ತಾಯ
ಕೆಎಸ್ಆರ್ಟಿಸಿ, ಬಿಎಂಟಿಸಿ ನೂತನ ಎಂಡಿಗಳಿಗೆ ಸಾರಿಗೆ ನೌಕರರ ಕೂಟದಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಬೆಂಗಳೂರಿನ ಶಾಂತಿನಗರ ಸಾರಿಗೆ ಕೇಂದ್ರ ಕಚೇರಿಯಲ್ಲಿ ಮನವಿ ಸಲ್ಲಿಕ್ಕೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ನೂತನ ವ್ಯವಸ್ಥಾಪಕ ನಿರ್ದೇಶಕರನ್ನು ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಶಾಂತಿನಗರದಲ್ಲಿರುವ ಸಂಸ್ಥೆಯ ಕೇಮದ್ರ ಕಚೇರಿಯಲ್ಲಿ ಭೇಟಿ ಮಾಡಿ, ನೌಕರರ ಜ್ವಲಂತ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಈ ಉನ್ನತ ಮಟ್ಟದ ನಿಯೋಗ ಸಾರಿಗೆ ಎರಡು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಲ್ಲಿ, ನೌಕರರು ಎದುರಿಸುತ್ತಿರುವ ವೇತನ ತಾರತಮ್ಯ, ಭತ್ಯೆಗಳ ವಿಳಂಬ ಮತ್ತು ಡಿಪೋ ಮಟ್ಟದ ಕಿರುಕುಳ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿ ಶೀಘ್ರ ಪರಿಹಾರಕ್ಕೆ ಒತ್ತಾಯಿಸಿತು.
ಕೆಎಸ್ಆರ್ಟಿಸಿ ನೂತನ ಎಂಡಿ ಶಿವಕುಮಾರ್ಗೆ ಮನವಿ: ಮೊದಲಿಗೆ ಸಾರಿಗೆ ನೌಕರರ ಕೂಟದ ನಿಯೋಗವು ಕೆಎಸ್ಆರ್ಟಿಸಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು. ಇದೇ ಸಂದರ್ಭದಲ್ಲಿ ನೌಕರರು ಎದುರಿಸುತ್ತಿರುವ ಆರ್ಥಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಪ್ರಮುಖವಾಗಿ ನೌಕರರ ವೇತನ ಪರಿಷ್ಕರಣೆ, ಬಾಕಿ ಇರುವ ಇತರೆ ಭತ್ಯೆಗಳ ಬಿಡುಗಡೆ ಮತ್ತು ನಿರಂತರ ಕರ್ತವ್ಯದ ಒತ್ತಡದಿಂದ ನೌಕರರಿಗೆ ಆಗುತ್ತಿರುವ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೂಟದ ಪದಾಧಿಕಾರಿಗಳು ಈ ವೇಳೆ ಆಡಳಿತ ಮಂಡಳಿಯನ್ನು ಬಲವಾಗಿ ಆಗ್ರಹಿಸಿದರು.
ಶೀಘ್ರದಲ್ಲೇ ಸಭೆ ಕರೆಯುತ್ತೇವೆ ಎಂದು ಭರವಸೆ ನೀಡಿದ ಎಂಡಿ: ನೌಕರರ ಕೂಟದ ಮನವಿಯನ್ನು ಆಲಿಸಿದ ಕೆಎಸ್ಆರ್ಟಿಸಿ ಎಂಡಿ ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ನೌಕರರ ಹಿತರಕ್ಷಣೆ ಮತ್ತು ಸಂಸ್ಥೆಯ ಅಭಿವೃದ್ಧಿ ಎರಡೂ ತಮಗೆ ಮುಖ್ಯ ಎಂದು ಹೇಳಿದರು.
ಜತೆಗೆ ನೌಕರರಿಗೆ ಆಗುತ್ತಿರುವ ಸಮಸ್ಯೆಗಳ ನಿವಾರಣೆ ಮತ್ತು ವೇತನ ಸೇರಿದಂತೆ ಇತರೆ ಭತ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಅತಿ ಶೀಘ್ರದಲ್ಲಿಯೇ ಕೂಟದ ಪದಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಜಂಟಿ ಸಭೆಯನ್ನು ಕರೆಯುವುದಾಗಿ ಎಂಡಿ ನಿಯೋಗಕ್ಕೆ ಭರವಸೆ ನೀಡಿದರು.
ಬಿಎಂಟಿಸಿ ಎಂಡಿ ರಘುನಂದನ್ ಮೂರ್ತಿ ಅವರೊಂದಿಗೆ ಚರ್ಚೆ: ಇದಾದ ನಂತರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ನೇತೃತ್ವದ ತಂಡವು ಬಿಎಂಟಿಸಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾದ ರಘುನಂದನ್ ಮೂರ್ತಿ ಅವರನ್ನು ಭೇಟಿ ಮಾಡಿತು. ಬೆಂಗಳೂರು ನಗರದ ಸಾರಿಗೆ ಜೀವಾಳವಾಗಿರುವ ಬಿಎಂಟಿಸಿ ನೌಕರರ ಸಮಸ್ಯೆಗಳ ಬಗ್ಗೆ ಇಲ್ಲಿ ಗಂಭೀರ ಚರ್ಚೆ ನಡೆಯಿತು.

ವಿಶೇಷವಾಗಿ ಬಿಎಂಟಿಸಿ ಡಿಪೋಗಳಲ್ಲಿ ನೌಕರರಿಗೆ ಆಗುತ್ತಿರುವ ಕಿರುಕುಳ ಬಗ್ಗೆ ಎಂಡಿ ಅವರ ಗಮನಕ್ಕೆ ತರಲಾಯಿತು. ಡಿಪೋ ಮಟ್ಟದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಬೇಕು ಎಂದು ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.
2021ರಲ್ಲಿ ನಡೆದ ಸಾರಿಗೆ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ನೌಕರರ ಬಗ್ಗೆ ಚರ್ಚೆ ನಡೆಸಲಾಯಿತು. ಅವರಿಗೆ ಕಾನೂನಾತ್ಮಕವಾಗಿ ಸಿಗಬೇಕಾದ ಹಕ್ಕುಗಳನ್ನು ಮರಳಿ ನೀಡುವಲ್ಲಿ ಮಾನವೀಯ ನೆಲಗಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಎಂಡಿ ಅವರಿಗೆ ಮನವಿ ಮಾಡಿತು.
ವಜಾಗೊಂಡು ನಿವೃತ್ತರಾಗಿರುವ ನೌಕರರಿಗೆ ಆರ್ಥಿಕ ಸೌಲಭ್ಯ ನೀಡಲು ಒತ್ತಾಯ: ಮುಷ್ಕರದ ಸಂದರ್ಭದಲ್ಲಿ ವಜಾಗೊಂಡು, ಅದೇ ಸ್ಥಿತಿಯಲ್ಲಿಯೇ ನಿವೃತ್ತಿ ಹೊಂದಿದ ನೌಕರರ ಆರ್ಥಿಕ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಅಂತಹ ನೌಕರರಿಗೆ ಸಿಗಬೇಕಿರುವ ಗ್ರಾಚ್ಯುಟಿ ಸೇರಿದಂತೆ ಇತರೆ ನ್ಯಾಯಯುತ ಆರ್ಥಿಕ ಸೌಲಭ್ಯಗಳನ್ನು ಕೊಡಿಸುವಲ್ಲಿ ತಾವು ವಿಶೇಷ ಮನಸ್ಸು ಮಾಡಬೇಕು ಎಂದು ನಿಯೋಗವು ಎಂಡಿ ರಘುನಂದನ್ ಮೂರ್ತಿ ಅವರಿಗೆ ಮನವಿ ಮಾಡಿತು.
ಜೀವಮಾನವಿಡೀ ಸಂಸ್ಥೆಗೆ ದುಡಿದು ಕೊನೆಯ ದಿನಗಳಲ್ಲಿ ಆರ್ಥಿಕ ಸೌಲಭ್ಯಗಳಿಲ್ಲದೆ ಪರದಾಡುತ್ತಿರುವ ನಿವೃತ್ತ ನೌಕರರ ಕುಟುಂಬಗಳಿಗೆ ನೆರವಾಗುವುದು ಸಂಸ್ಥೆಯ ಆದ್ಯ ಕರ್ತವ್ಯವಾಗಬೇಕು ಎಂದು ಕೂಟದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಸಕಾರಾತ್ಮಕವಾಗಿ ಸ್ಪಂದಿಸಿದ ಬಿಎಂಟಿಸಿ ಎಂಡಿ ರಘುನಂದನ್ ಮೂರ್ತಿ: ಕೂಟದ ಸುದೀರ್ಘ ಅಹವಾಲುಗಳನ್ನು ಆಲಿಸಿದ ಬಿಎಂಟಿಸಿ ಎಂಡಿ ರಘುನಂದನ್ ಮೂರ್ತಿ ಅವರು, ನೌಕರರ ಪ್ರತಿಯೊಂದು ಸಮಸ್ಯೆಯನ್ನೂ ಹಂತ ಹಂತವಾಗಿ ಪರಿಹರಿಸಲು ತಾವು ಬದ್ಧರಾಗಿರುವುದಾಗಿ ಭರವಸೆ ನೀಡಿದರು. ಇನ್ನು ವಜಾಗೊಂಡ ನೌಕರರ ವಿಷಯದಲ್ಲಿ ಕಾನೂನು ಚೌಕಟ್ಟಿನಲ್ಲಿ ಮಾಡಬಹುದಾದ ಎಲ್ಲ ನೆರವನ್ನು ಪರಿಶೀಲಿಸುವುದಾಗಿ ಹೇಳಿದರು.
ಡಿಪೋ ಮಟ್ಟದ ಸಮಸ್ಯೆಗಳು ಹಾಗೂ ಆರ್ಥಿಕ ಸೌಲಭ್ಯಗಳ ವಿಳಂಬದ ಕುರಿತು ಸಮಗ್ರವಾಗಿ ಚರ್ಚಿಸಲು ಎಲ್ಲ ಪ್ರಮುಖ ಅಧಿಕಾರಿಗಳು ಹಾಗೂ ಕೂಟದ ಪ್ರತಿನಿಧಿಗಳ ಸಮ್ಮುಖದಲ್ಲಿ ಅತಿ ಶೀಘ್ರದಲ್ಲೇ ಪ್ರತ್ಯೇಕ ಸಭೆ ಕರೆಯುವುದಾಗಿ ಬಿಎಂಟಿಸಿ ಎಂಡಿ ಭರವಸೆ ನೀಡಿದರು.
ಶಾಂತಿನಗರದ ಪ್ರಧಾನ ಕಚೇರಿಯಲ್ಲಿ ನಡೆದ ಈ ಉಭಯ ಅಧಿಕಾರಿಗಳ ಭೇಟಿಯು ನೌಕರರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಹಲವು ಮಂದಿ ಕೂಟದ ಪದಾಧಿಕಾರಿಗಳು ನಿಯೋಗದಲ್ಲಿದ್ದರು.
ಸಾರಿಗೆ ಸಂಸ್ಥೆಗಳು ನಷ್ಟದಿಂದ ಮುನ್ನಡೆಯಬೇಕಾದರೆ ನೌಕರರ ಸಹಕಾರ ಮುಖ್ಯ. ಅದೇ ರೀತಿ ನೌಕರರ ಹೊಟ್ಟೆ ತುಂಬದಿದ್ದರೆ ಸಂಸ್ಥೆ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ನೂತನ ಎಂಡಿಗಳು ಸಭೆ ಕರೆದು ಕೊಟ್ಟ ಮಾತಿನಂತೆ ಸಮಸ್ಯೆ ಬಗೆಹರಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಭೇಟಿಯ ಬಳಿಕ ಕೂಟದ ಮುಖಂಡರು ತಿಳಿಸಿದರು.







