ವಾರ್ತಾ ಇಲಾಖೆ ನೂತನ ಆಯುಕ್ತರಾಗಿ ಡಿಐಜಿ ಅನುಚೇತ್ ಅಧಿಕಾರ ಸ್ವೀಕಾರ
ವಾರ್ತಾ ಇಲಾಖೆಯ ಕಾರ್ಯವೈಖರಿಗೆ ಹೊಸ ವೇಗ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಅನುಚೇತ್ ಅವರು, ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ ಹಾಗೂ ಸಮರ್ಥ ಆಡಳಿತಕ್ಕಾಗಿ ಹೆಸರಾಗಿದ್ದಾರೆ.

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕರಿಸಿದ್ದಾರೆ.
ಇದುವರೆಗೆ ಇಲಾಖೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಹೇಮಂತ್ ಎಂ. ನಿಂಬಾಳ್ಕರ್ ಅವರು ಇಂದು ಗುರುವಾರ ಬೆಳಗ್ಗೆ ಅಧಿಕಾರ ಹಸ್ತಾಂತರಿಸಿದರು.
ಎಂ.ಎನ್. ಅನುಚೇತ್ ಅವರು ಮೂಲತಃ ಕೋಲಾರ ಜಿಲ್ಲೆಯವರಾಗಿದ್ದು, ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಿಂದ 2006ರಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದು, ತಾಂತ್ರಿಕ ಹಿನ್ನೆಲೆ ಹೊಂದಿದ್ದಾರೆ. ಆ ಬಳಿಕ ನಾಗರಿಕ ಸೇವೆಗೆ ಸೇರುವ ಆಕಾಂಕ್ಷೆಯೊಂದಿಗೆ ಶ್ರಮಿಸಿ, 2008ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಯಶಸ್ಸು ಸಾಧಿಸಿದರು. ತರುವಾಯ 2009ರ ಬ್ಯಾಚ್ ನ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ವಾರ್ತಾ ಇಲಾಖೆಯ ಕಾರ್ಯವೈಖರಿಗೆ ಹೊಸ ವೇಗ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಅನುಚೇತ್ ಅವರು, ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ ಹಾಗೂ ಸಮರ್ಥ ಆಡಳಿತಕ್ಕಾಗಿ ಹೆಸರಾಗಿದ್ದಾರೆ. ಈ ಹಿಂದೆ ಇವರು ಕೈಗೊಂಡ ಅತ್ಯುತ್ತಮ ತನಿಖಾ ಕಾರ್ಯಗಳನ್ನು ಗುರುತಿಸಿ ಕೇಂದ್ರ ಸರ್ಕಾರವು ಇವರಿಗೆ ಪ್ರತಿಷ್ಠಿತ “ಕೇಂದ್ರ ಗೃಹ ಸಚಿವರ ತನಿಖೆಗಾಗಿನ ಅತ್ಯುತ್ತಮ ಪದಕ ನೀಡಿ ಗೌರವಿಸಿದೆ.
2011ರಲ್ಲಿ ಪುತ್ತೂರಿನ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ASP) ತಮ್ಮ ವೃತ್ತಿಜೀವನ ಆರಂಭಿಸಿದ ಇವರು, ಆ ಬಳಿಕ ಸಿಐಡಿ (CID) ವಿಭಾಗದ ಎಸ್ಪಿ ಆಗಿ, ಬೆಂಗಳೂರು ನಗರದ ಕೇಂದ್ರ ವಿಭಾಗದ ಡಿಸಿಪಿ (DCP Central) ಆಗಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರದ ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಆಗಿ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸಿ, ನಗರದ ಸಂಚಾರ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹುದ್ದೆಗೆ ಬರುವ ಮುನ್ನ ಇವರು ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಪಿ (DIGP) ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಸದ್ಯ ಈಗ ಎಂ.ಎನ್.ಅನುಚೇತ್ ಅವರಿಗೆ ವಾರ್ತಾ ಇಲಾಖೆಯ ಜತೆಗೆ ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರ ಹೆಚ್ಚುವರಿ ಪ್ರಬಾರದಲ್ಲೂ ಇವರನ್ನು ಇರಿಸಿ ಸರ್ಕಾರ ಆದೇಶಿಸಿದೆ.
ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ನೂತನ ಆಯುಕ್ತರಿಗೆ ಶುಭಕೋರಿದರು. ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್, ಸಿದ್ದೇಶ್ವರಪ್ಪ ಜಿಬಿ, ಸಿ.ಆರ್.ನವೀನ್, ಉಪನಿರ್ದೇಶಕರಾದ ಬಿ.ಕೆ.ರಾಮಲಿಂಗಪ್ಪ, ಶಫಿ ಸಾದುದ್ಧಿನ್ ಸೇರಿದಂತೆ ಇತರರರು ಇದ್ದರು.







