- ವಿಜಯಪಥ ಸಮಗ್ರ ಸುದ್ದಿ
ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಮತ್ತು ನೇರಳೆಘಟ್ಟದಲ್ಲಿ ಎರಡು ಬಣಗಳ ನಡುವೆ ಮತದಾನಕ್ಕೆ ಸಂಬಂಧಿಸಿದಂತೆ ಘರ್ಷಣೆಯಾಗಿರುವುದನ್ನು ಹೊರತು ಪಡಿಸಿದರೆ, ಬೆಂಗಳೂರು ಜಿಲ್ಲೆಯಾದ್ಯಂತ ಇಂದು ನಡೆದ ಎರಡನೇ ಹಂತಗದ ಗ್ರಾಮ ಪಂಚಾಯಿತಿ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ.
ಆದರೆ, ತಾಲೂಕಿನ ಹಾಡೋನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಸಿಂಬ್ಬದಿ ಹರೀಶ್ ಎಂಬಾತ ಮತದಾರರನ್ನು ಬೂತ್ ಒಳಗೆ ಕರಕೊಂಡು ಮತಹಾಕಿಸುತ್ತಿದ್ದ. ಜಿಲ್ಲಾ ಪಂಚಾಯಿತಿ ಸದಸ್ಯ ಅಪ್ಪಯ್ಯಣ್ಣನ ಬೆಂಬಲಿಗ ಏಜೆಂಟ್ ಮತಗಟ್ಟೆ ಕೇಂದ್ರದಲ್ಲಿ ಇವರಿಗೇ ಮತದಾನ ಮಾಡಿ ಎಂದು ಹೇಳುತ್ತಿದ್ದ ಎನ್ನಲಾಗಿದೆ.
ಇದಕ್ಕೆ ಮತ್ತೊಂದು ಬಣದವರು ಆಕ್ಷೇಪ ವ್ಯಕ್ತಪಡಿಸಿದ್ದಾಗ, ಮತಗಟ್ಟೆಯೊಳಗೆ ಎರಡು ಬಣಗಳ ನಡುವೆ ಘರ್ಷಣೆಯಾಗಿದೆ. ಈ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಅಪ್ಪಯ್ಯಣ್ಣ ಶೆಟ್ಟಪ್ಪ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ.
ಅಪ್ಪಯ್ಯಣ್ಣನ ಬೆಂಬಲಿಗರು ಮತದಾರಿಗೆ ಧಮ್ಕಿಯಾಕುವ ಮೂಲಕ ಭಯದ ವಾತಾವರಣ ಉಂಟು ಮಾಡಿದ್ದರೆಂದು ಮತ್ತೊಂದು ಬಣದ ಗುಂಪು ಆರೋಪ ಮಾಡಿದೆ.
ನೇರಳೆಘಟ್ಟದಲ್ಲೂ ಸಹ ಮತದಾನ ಸಮಯದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ಮಧ್ಯ ಪ್ರವೇಶದ ನಂತರ ಪರಿಸ್ಥಿತಿ ಶಾಂತಿಯುತವಾಗಿ ನಡೆಯಿತು.