- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ದೇವನಹಳ್ಳಿಗೆ ಇಂದಿನಿಂದ ಡೆಮು ವಿಶೇಷ ರೈಲು ಸೇವೆ ಆರಂಭವಾಗಿದ್ದು, ಕೆಎಸ್ಆರ್-ದೇವನಹಳ್ಳಿ ಮೊದಲ ಡೆಮು ರೈಲು ಇಂದು ಬೆಳಗ್ಗೆ 6.02ಕ್ಕೆ ತ ದೇವನಹಳ್ಳಿಯನ್ನು ತಲುಪಿತು. ವಿಮಾನ ನಿಲ್ದಾಣ ಕ್ಯಾಂಪಸ್ ಒಳಗೆ 6 ಕಡೆ ರೈಲು ನಿಲುಗಡೆ ಸೌಲಭ್ಯವಿದೆ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಪ್ರಯಾಣಿಕರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಯಿತು.
ಹೀಗಾಗಿ ಬೆಂಗಳೂರಿನಿಂದ ಇನ್ನುಮುಂದೆ ಕೇವಲ 10-15 ರೂ.ಗಳಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಬಹದಾಗಿದೆ. ಇಂದಿನಿಂದ ಆರಂಭವಾದ ವಿಶೇಷ ರೈಲಿನಲ್ಲಿ ಸಂಸದ ಪಿ.ಸಿ. ಮೋಹನ್ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರಯಾಣಿಸಿದರು. ಈ ಸೌಲಭ್ಯದಿಂದಾಗಿ ಬೆಂಗಳೂರಿನ ವಿವಿಧ ಭಾಗಗಳಿಂದ 10ರಿಂದ 15 ರೂ. ದರದಲ್ಲಿ ಏರ್ಪೋರ್ಟ್ ತಲುಪಲು ಸಾಧ್ಯವಿದೆ. ಇದರಿಂದ ದುಬಾರಿ ಹಣ ತೆತ್ತು ಬಿಎಂಟಿಸಿ ವೋಲ್ವೋ ಬಸ್, ಕ್ಯಾಬ್ಗಳಲ್ಲಿ ಹೋಗುವುದು ತಪ್ಪಿದಂತಾಗಿದೆ.
ಮೆಜೆಸ್ಟಿಕ್ನ ರೈಲ್ವೆ ನಿಲ್ದಾಣದಿಂದ ಹಾಲ್ಟ್ ಸ್ಟೇಷನ್ಗೆ ಕೇವಲ 50 ನಿಮಿಷಗಳು ಬೇಕಾಗುತ್ತವೆ. ಮುಂದೆ ಈ ಅವಧಿಯನ್ನುಇನ್ನೂ ಕಡಿಮೆಗೊಳಿಸಲು ಸ್ಟಾಪ್ಗಳ ಸಂಖ್ಯೆಯನ್ನು ಕಡಿತಗೊಳಿಸುವ ಬಗ್ಗೆಯೂ ಯೋಚಿಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇನ್ನು ಡೆಮೊ ರೈಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೀಟುಗಳ ಮಧ್ಯೆ ಅಂತರ ವ್ಯವಸ್ಥೆ ಮಾಡಲಾಗಿದೆ. ಮೊದಲ ರೈಲಿನಲ್ಲೇ ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು. ಈ ವಿಶೇಷ ರೈಲು ಕೆಂಪೇಗೌಡ ಏರ್ಪೋರ್ಟ್ ಬಳಿಯ ಹಾಲ್ಟ್ ಸ್ಟೇಷನ್ಗೆ ತೆರಳಲಿದೆ. ಈ ರೈಲಿಗೆ ಯಲಹಂಕದಲ್ಲಿ ಸ್ಟಾಪ್ ಇರಲಿದೆ. ಹಾಲ್ಟ್ ಸ್ಟೇಷನ್ನಿಂದ ಉಚಿತ ಬಸ್ ಮೂಲಕ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.
ವಿಮಾನಗಳ ಸಮಯವನ್ನು ಗಮನದಲ್ಲಿಟ್ಟುಕೊಂಡು ರೈಲಿನ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೆಚ್ಚು ವಿಮಾನಗಳು ಸಂಚರಿಸುವ ಅವಧಿಗೂ ಮೊದಲೇ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಲು ಅನುಕೂಲವಾಗುವಂತೆ ರೈಲು ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್‌ನಿಂದ ಏರ್ಪೋರ್ಟ್ಗೆ ದಿನಕ್ಕೆ ಮೂರು ಜೋಡಿ ರೈಲುಗಳು ಸಂಚರಿಸಲಿವೆ.
ಅಂದಹಾಗೆ ದೇವನಹಳ್ಳಿಯಿಂದ ಹಾಲ್ಟ್ ಸ್ಟೇಷನ್ಗೆ 3, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ 2, ಬಂಗಾರಪೇಟೆಯಿಂದ 2, ಯಲಹಂಕದಿಂದ 1, ಯಶವಂತಪುರದಿಂದ 1, ಬೆಂಗಳೂರು ಕಂಟೋನ್ಮೆಂಟ್ನಿಂದ 1 ರೈಲು ಹಾಲ್ಟ್ ಸ್ಟೇಷನ್ಗೆ ಸಂಚರಿಸಲಿವೆ. ಆರಂಭಿಕವಾಗಿ 10 ರೈಲುಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಕೊರೊನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿಕೊಂಡು ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯನ್ನು ರೈಲ್ವೆ ಇಲಾಖೆ ಹೊಂದಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.