ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ರಾಜ್ಯ ಸರ್ಕಾರ ಜನವರಿ 1 ರಿಂದ ಶಾಲಾ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಪರಿಣಾಮ 10 ತಿಂಗಳ ನಂತರ ಶಾಲಾ ಕಾಲೇಜುಗಳು ಎಂದಿನಂತೆ ಆರಂಭವಾಗಿವೆ. ಆದರೆ, ದುರಾದೃಷ್ಟವಶಾತ್ 25 ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿರುವುದು ಇದೀಗ ದೃಢಪಟ್ಟಿದ್ದು, ಮಕ್ಕಳು ಮತ್ತು ಪಾಲಕರಲ್ಲಿ ಆತಂಕ ಮನೆ ಮಾಡಿದೆ.
ಶಾಲೆ ಆರಂಭವಾಯಿತು ಎಂದು ಮಕ್ಕಳೂ ಸಹ ಉತ್ಸಾಹದಿಂದಲೇ ಶಾಲೆಗೆ ತೆರಳಿದ್ದು, ಶಿಕ್ಷಕರು ಮಕ್ಕಳನ್ನು ಸಂತೋಷದಿಂದಲೇ ಬರಮಾಡಿಕೊಂಡಿದ್ದಾರೆ. ಆದರೆ ಶಿಕ್ಷಕರನ್ನು ಬಾಧಿಸಿರುವ ಕೊರೊನಾದಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ದಾಖಲಾತಿ ಕಡಿಮೆಯಾಗುವ ಆತಂಕ ಎದುರಾಗಿದೆ.
ಈ ನಡುವೆ ಕೊರೊನಾಗೆ ಯಾರೂ ಹೆದರುವ ಅಗತ್ಯವಿಲ್ಲ. ಪೋಷಕರು ಧೈರ್ಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಿ. ಸರ್ಕಾರ ಅಗತ್ಯ ಕ್ರಮಗಳನ್ನೂ ಜರುಗಿಸಲಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಭರವಸೆ ನೀಡಿದ್ದಾರೆ.
25 ಶಿಕ್ಷಕರಿಗೆ ಸೋಂಕು ಧೃಡಪಟ್ಟಿರುವುದು ಅಧಿಕೃತ ಅಲ್ಲ. ಅಲ್ಲದೆ, ಲಕ್ಷದ ಮುಂದೆ 25 ಪ್ರಕರಣಗಳು ದೊಡ್ಡ ವಿಚಾರವಲ್ಲ. ಹೀಗಾಗಿ ಯಾರೂ ಹೆದರುವ ಅಗತ್ಯ ಇಲ್ಲ. ಶಾಲೆ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಎಷ್ಟು ಸಂಖ್ಯೆಯಲ್ಲಿ ಪಾಸಿಟಿವ್ ಬಂದಿದೆ ಎಂಬ ನಿಖರ ಮಾಹಿತಿ ಇಲ್ಲ. ಇದರ ಬಗ್ಗೆ ಸರಿಯಾದ ಮಾಹಿತಿ ಪಡೆದು ನಂತರ ಧೃಡಪಡಿಸುತ್ತೇನೆ. ಶಾಲೆಗಳು ಸುಸೂತ್ರವಾಗಿ ನಡೆಯುತ್ತಿವೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ. ಸರ್ಕಾರ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿದೆ. ಯಾರಿಗಾದರೂ ಪಾಸಿಟಿವ್ ಬಂದರೆ ಚಿಕಿತ್ಸೆ ನೀಡಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.
ಇನ್ನೂ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಆದರೆ, ಕರ್ನಾಟಕದಲ್ಲಿ ಈವರೆಗೆ ಯಾವ ಪ್ರಕರಣಗಳೂ ಪತ್ತೆಯಾಗಿಲ್ಲ. ಆದರೆ, ಜಿಲ್ಲಾವಾರು ಎಚ್ಚರಿಕೆ ವಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.