ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಷ್ಟ್ರೀಯ ಪಕ್ಷಗಳು ನಮ್ಮ ಮುಖಂಡರ ಕಾಲು ಹಿಡಿಯುವುದನ್ನು ನಿಲ್ಲಿಸಿ, ಮರ್ಯಾದೆ ಉಳಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯಭರಿತ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ನಂತರ ಜೆಡಿಎಸ್ ಬೆಂಬಲಿತ ಸದಸ್ಯರ ಮನೆ ಬಾಗಿಲಿಗೆ ರಾಷ್ಟ್ರೀಯ ಪಕ್ಷಗಳು ಮುಖಂಡರು ಅಲೆಯುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಸೇರಿಕೊಳ್ಳಿ ನಿಮಗೆ ಎಲ್ಲ ಸೌಲಭ್ಯವನ್ನು ನೀಡುತ್ತೇವೆ ಎಂದು ಬೇಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆ ನಂತರದ ಬೆಳವಣಿಗೆಗಳು ಆಘಾತಕಾರಿಯಾಗಿವೆ. ಮೀಸಲಾತಿ, ಬೆದರಿಕೆ ಮೂಲಕ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಸೆಳೆಯುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಅದಕ್ಕೆ ನಮ್ಮವರೂ ತಿರುಗೇಟು ನೀಡುತ್ತಿದ್ದಾರೆ. ಆದರೆ ಅತಿ ಹೆಚ್ಚು ಸ್ಥಾನ ಗಳಿಸಿದೆವು ಎಂದು ಹೇಳಿಕೊಳ್ಳುವ ರಾಷ್ಟ್ರೀಯ ಪಕ್ಷಗಳಿಗೆ ಯಾಕೆ ಇಂಥ ಗತಿ? ತಿಳಿಯದು ಎಂದು ವ್ಯಂಗ್ಯವಾಡಿದ್ದಾರೆ.
ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಕಾಲುಗಳನ್ನು ಹಿಡಿಯುತ್ತಿವೆ, ಅವರ ಮನೆ ಬಾಗಿಲಿಗೆ ಅಲೆಯುತ್ತಿವೆ ಎಂದರೆ, ಕನ್ನಡಿಗರು ಜೆಡಿಎಸ್‌ಗೆ ಎಷ್ಟು ಬಲ ತುಂಬಿದ್ದಾರೆ ಎಂಬುದು ಯಾರಿಗಾದರೂ ಗೊತ್ತಾಗುವ ವಿಚಾರ ಎಂದು ಅಭಿಮಾನದಿಂದ ಹೇಳಿದ್ದಾರೆ.