ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಈ ಮಹಾನಗರದಲ್ಲಿ 71 ವರ್ಷದ ವೃದ್ಧೆಯ ಮೇಲೆ 31 ವರ್ಷದ ವ್ಯಕ್ತಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೋರಮಂಗಲದ 6ನೇ ಬ್ಲಾಕ್ ನಿವಾಸಿ ಜ್ಯೂಲಿರೋಸ್ ಈ ಕೃತ್ಯವೆಸಗಿರುವ ಕಾಮುಕನಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಜ. 2ರಂದು ಕೋರಮಂಗಲದ 6ನೇ ಬ್ಲಾಕ್ನಲ್ಲಿರುವ ಈತ ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಹೋಗಿ ಅತ್ಯಾಚಾರವೆಸಗಿದ್ದಾನೆ. ಒಬ್ಬರೆ ಇದ್ದ ವೃದ್ಧೆಯನ್ನು ಪರಿಚಯಿಸಿಕೊಂಡಿದ್ದ ಆರೋಪಿ ಆಕೆಯ ಮನೆಯಲ್ಲೇ ಈ ಹಿಂದೆ ಬಾಡಿಗೆಗೆ ಇದ್ದ. ಅಜ್ಜಿಗೆ ಹೊರಗೆ ಓಡಾಡಲು ಶಕ್ತಿಯಿಲ್ಲದ ಕಾರಣ ಆಕೆಗೆ ಚಿಕ್ಕಪುಟ್ಟ ಸಹಾಯ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.
ಹೀಗೆ ಸಹಾಯ ಮಾಡುವ ಮೂಲಕ ನಂಬಿಕೆ ಗಿಟ್ಟಿಸಿಕೊಂಡಿದ್ದ ಜ್ಯೂಲಿರೋಸ್ ಜ. 2ರಂದು ಮುಖ್ಯದ್ವಾರದ ಗ್ಲಾಸ್ ಒಡೆದು ಮನೆಯೊಳಗೆ ಪ್ರವೇಶಿಸಿದ್ದಾನೆ. ಬಳಿಕ ರೂಂನಲ್ಲಿ ಮಲಗಿದ್ದ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿ, ಪರಾರಿಯಾಗಿದ್ದ. ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದ ವೃದ್ಧೆ ಬಳಿಕ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.
ಅಜ್ಜಿಕೊಟ್ಟ ದೂರಿನ ಮೇರೆಗೆ ಪ್ರಕರಣದ ಬೆನ್ನತ್ತಿದ ಖಾಕಿ ಪಡೆಗೆ ಈ ಆರೋಪಿ ಮೇಲೆ ಅನುಮಾನ ಬಂದ ಹಿನ್ನೆಲೆ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ. ತನ್ನ ಅಜ್ಜಿ ವಯಸ್ಸಿನ ಮನೆಯೊಡತಿಯನ್ನೇ ಕಾಮತೃಷೆಗೆ ಬಳಸಿಕೊಂಡ ಈ ಕಾಮುಕನನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಸದ್ಯ ವೃದ್ಧೆಯ ಆರೋಗ್ಯ ಸುಧಾರಿಸಿದೆ.