ವಿಜಯಪಥ ಸಮಗ್ರ ಸುದ್ದಿ
ನಂಜನಗೂಡು: ಸತತ 54 ದಿನಗಳ ಕಾಲ ಏಷಿಯನ್ ಪೇಂಟ್ಸ್ ಕಾರ್ಖಾನೆ ಮುಂದೆ ರೈತರು ನಡೆಸುತ್ತಿರುವ ಪ್ರತಿಭಟನೆ ತಾರ್ತಿಕ ಅಂತ್ಯ ಕಾಣುವ ಸೂಚನೆ ದೊರೆತಿದೆ.
ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೂಮಿ ಕಳೆದುಕೊಂಡವರಿಗೆ ಇದೇ ಘಟಕದಲ್ಲಿ ಉದ್ಯೋಗ ನೀಡಲು ಮಾಲೀಕರು ಸಮ್ಮತಿ ಸೂಚಿಸಿದ್ದಾರೆ ಎಂದು ಪ್ರತಿಭಟನಾ ನಿರತ ರೈತರಿಗೆ ತಿಳಿಸಿದರು.
ಜತೆಗೆ ಇಷ್ಟು ತಾಳ್ಮೆಯಿಂದ 54 ದಿನಗಳು ನಿರಂತವಾಗಿ ನೀವು ನಡೆಸಿದ ಪ್ರತಿಭಟನೆಗೆ ಈಗ ಪ್ರತಿಫಲ ಸಿಕ್ಕಿದೆ. ಇಲ್ಲೇ ಪ್ಲಾಂಟ್ ಮಾಡಿ ಎಲ್ಲರಿಗೂ ಉದ್ಯೋಗ ನೀಡುತ್ತೇವೆ ಎಂದು ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದಾರೆ. ನೀವು ಪ್ರತಿಭಟನೆ ಕೈಬಿಡಿ ಎಂದು ಜಿಲ್ಲಾಧಿಕಾರಿ ರೈತರಲ್ಲಿ ಮನವಿ ಮಾಡಿದರು.
ಆದರೆ, ಪ್ರತಿಭಟನಾ ನಿರತ ರೈತರು ಉದ್ಯೋಗ ನೀಡುವ ಸಂಬಂಧ ಅಧಿಕೃತ ಆದೇಶ ಪ್ರತಿ ನಮ್ಮ ಕೈ ಸೇರುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ಮನವೊಲಿಕೆ ಪ್ರಯತ್ನ ವಿಫಲವಾದಂತ್ತಾಗಿದೆ.
ಇನ್ನು ರೈತರ ಹೇಳಿಕೆಯಿಂದ ಸ್ವಲ್ಪಗಲಿಬಿಲಿಗೊಂಡ ಜಿಲ್ಲಾಧಿಕಾರಿ ಈ ಬಗ್ಗೆ ಶೀಘ್ರವೇ ಕ್ರಮವಹಿಸಲಾಗುವುದು ಎಂದು ವಾಪಸಾದರು.
ನಂಜನಗೂಡಿನಲ್ಲಿ ಏಷಿಯನ್ ಪೇಂಟ್ಸ್‌ಗೆ ಜಾಗ ನೀಡಿದ್ದ ರೈತರಿಗೆ ಅದೇ ಘಟಕದಲ್ಲಿ ಉದ್ಯೋಗ ನೀಡಲು ಕಾರ್ಖಾನೆಯವರು ನಿರಾಕರಿಸಿದ್ದರು. ಇದನ್ನು ವಿರೋಧಿಸಿ ರೈತರು ಕಾರ್ಖಾನೆ ಎದುರು ಅನಿರ್ದಿಷ್ಟಾವಧಿ ಧರಣಿ ಕುಳಿತಿದ್ದಾರೆ. ಕೆಲಸಕೊಡಿ ಇಲ್ಲ ನಮ್ಮ ಭೂಮಿಯನ್ನು ನಮಗೆ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ.