ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಮಾಹಿತಿ ನೀಡಿದ್ದಾರೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ದೆಹಲಿ ವಿಶ್ವದ ಅನೇಕ ರಾಷ್ಟ್ರಗಳ ಗಮನ ಸೆಳೆದಿದೆ. ಅಲ್ಲದೇ ಇತ್ತೀಚೆಗೆ ದೇಶದ ಅನೇಕ ರಾಜ್ಯಗಳಲ್ಲಿ ಹಾಗೂ ಕರ್ನಾಟಕದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ದೆಹಲಿ ಮಾದರಿಯನ್ನು ಜನರು ಮೆಚ್ಚುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ಜು ಬದಿಗೆ ಸರಿಸುತ್ತಿದ್ದಾರೆ. ಇದು ಬದಲಾವಣೆಯ ಪರ್ವ ಕಾಲ ಎಂದರು.
ಕರ್ನಾಟಕದಲ್ಲಿ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸುತ್ತಿದ್ದು ಪ್ರಾಮಾಣಿಕ, ಸ್ವಚ್ಛ, ಜನಪರ ಆಡಳಿತದ ಬಗ್ಗೆ ಕಾಳಜಿ, ಒಲವು ಇರುವಂತಹ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಲಿದ್ದಾರೆ ಎಂದು ತಿಳಿಸಿದರು.
ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ಕರ್ನಾಟಕ ಉಸ್ತುವಾರಿ ರೋಮಿ ಭಾಟಿ ನೇತೃತ್ವದಲ್ಲಿ ಸಹ ಸಂಚಾಲಕ ವಿಜಯ್ ಶರ್ಮಾ, ಹಿರಿಯ ಮುಖಂಡ ಗೋಪಾಲ್ ರೆಡ್ಡಿ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಅವರನ್ನು ಒಳಗೊಂಡ ತಂಡ ರಚನೆ ಮಾಡಿದ್ದು ಪ್ರತಿ ಜಿಲ್ಲಾವಾರು ಭೇಟಿ ನೀಡಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ, ಮೊದಲ ಹಂತವಾಗಿ ರಾಮನಗರ, ಮೈಸೂರು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಆಮ್ ಆದ್ಮಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷದಿಂದ ಸ್ಪರ್ಧಿಸಲು ಇಚ್ಚಿಸುವಂತಹ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 7669400410 ಮಿಸ್ ಕಾಲ್ ಕೊಡುವುದರ ಮೂಲಕ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲೂ ಪ್ರಾಮಾಣಿಕ ರಾಜಕಾರಣದ ಹೆಜ್ಜೆ ಮೂಡಿಸಲು ಮುಂದಾಗಬಹುದು ಎಂದು ಹೇಳಿದರು.
ಮುಖ್ಯ ವಕ್ತಾರ ಶರತ್ ಖಾದ್ರಿ ಉಪಸ್ಥಿತರಿದ್ದರು.