ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ಕಾಂಗ್ರೆಸ್ ರಾಜಭವನ ಚಲೋ ರ‍್ಯಾಲಿ ನಡೆಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.
ಮೆಜೆಸ್ಟಿಕ್ನಿಂದ ಆರಂಭವಾದ ರ‍್ಯಾಲಿ ರಾಜಭವನದತ್ತ ಹೊರಟಿತು. ರಾಜಭವನ ಮುತ್ತಿಗೆ ಹಾಕಲು ಹೊರಟ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ವಶಕ್ಕೆ ಪಡೆದ ಕೈ ಕಾರ್ಯಕರ್ತರನ್ನು ಬಿಎಂಟಿಸಿ ಬಸ್ ನಲ್ಲಿ ಕರೆದುಕೊಂಡು ಹೋಗಲಾಯಿತು. ಬಳಿಕ ಕಾಂಗ್ರೆಸ್ ಮುಖಂಡರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರನ್ನು ಬಂಧಿಸಲಾಯಿತು.
ಇಂದು ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ರ‍್ಯಾಲಿ ಮೆಜೆಸ್ಟಿಕ್ನ ಕೆಎಸ್ಆರ್ ರೈಲು ನಿಲ್ದಾಣದಿಂದ ಆರಂಭವಾಗಯಿತು. ಕೆಎಸ್ಆರ್ ರೈಲು ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಆನಂದ ರಾವ್ ಫ್ಲೈಓವರ್ ಮೂಲಕ ಫ್ರೀಡಂ ಪಾರ್ಕ್ ಬಳಿಕ ರಾಜಭವನ ಚಲೋ ಕಾರ್ಯಕ್ರಮ ನಡೆಸಲಾಯಿತು. ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು, ರೈತರು ಭಾಗಿಯಾಗಿದ್ದರು.
ಮಹಾರಾಣಿ ಕಾಲೇಜು ಮುಂಭಾಗದ ರಸ್ತೆಯಲ್ಲಿ ರ‍್ಯಾಲಿ ತಡೆದ ಪೊಲೀಸರುಕಾರ್ಯಕರ್ತರನ್ನು ವಶಕ್ಕೆ ಪಡೆದರು. ಬಿಎಂಟಿಸಿ ಬಸ್ ನಲ್ಲಿ ಒತ್ತಾಯಪೂರ್ವಕವಾಗಿ ಹತ್ತಿಸಿಕೊಂಡು ಕರೆದೊಯ್ದರು.
ರಾಜಭವನ ಚಲೋ ರ‍್ಯಾಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ ಸೇರಿ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು. ಕೇಂದ್ರ ಸರ್ಕಾರ ಹಾಗೂ ವಿವಾದಾತ್ಮಕ ಕಾಯ್ದೆ ವಿರುದ್ಧ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ವತಿಯಿಂದ ಆಯೋಜಿಸಿರುವ ರಾಜಭವನ ಚಲೋ ರ‍್ಯಾಲಿಗೆ ಅನುಮತಿ ಇಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿಕೆ ನೀಡಿದ್ದಾರೆ . ಕೊರೊನಾ ನಿಯಮಾವಳಿ ಪ್ರಕಾರ 200ಕ್ಕೂ ಹೆಚ್ಚು ಜನರು ಸೇರುವ ಆಗಿಲ್ಲ. ನಿಯಮ ಉಲ್ಲಂಘನೆಯಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.