ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲುವಾಸ ಅನುಭವಿಸಿದ ನಂತರ ಕೊನೆಗೂ ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ.ಕೆ. ಶಶಿಕಲಾ ಇಂದು ಬಿಡುಗಡೆಗೊಂಡಿದ್ದಾರೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಶಶಿಕಲಾ ಚಿಕಿತ್ಸೆ ಪಡೆಯುತ್ತಿರುವ ಟ್ರಾಮಾ ಕೇಂದ್ರದ ಒಳಗೆ ಅವರ ವಕೀಲರೊಂದಿಗೆ ಜೈಲು ಅಧಿಕಾರಿ ಹೋಗಿ ಸಹಿ ಪಡೆಯುವ ಮೂಲಕ ಅಧಿಕೃತವಾಗಿ ಬಿಡುಗಡೆ ಮಾಡಿದರು.
ಈ ಮೂಲಕ ಬುಧವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲಾಗಿದ್ದು, ಆಸ್ಪತ್ರೆಯಿಂದಲೇ ಅವರು ಮನೆಗೆ ತೆರಳುವರು ಎಂದು ಹೇಳಲಾಗಿದೆ.
ಇನ್ನು ಶಶಿಕಲಾ ಅವರನ್ನು ಬಿಡುಗಡೆ ಮಾಡುವ ಹೊತ್ತಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಲ್ಲಾ ಕೋವಿಡ್ ಶಿಷ್ಟಾಚಾರಗಳನ್ನು ಪೂರ್ಣಗೊಳಿಸಲಾಗಿದೆ. ಅವರ ಆರೋಗ್ಯ ಈಗ ಬಹಳಷ್ಟು ಸುಧಾರಿಸಿದ್ದು ಹೃದಯ ಬಡಿತ ಪ್ರತಿ ನಿಮಿಷಕ್ಕೆ 76 ಬಾರಿ ಮತ್ತು ರಕ್ತದೊತ್ತಡ 166/86 ಎಂಎಂಎಚ್ಜಿ ಇದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ದೃಢಪಡಿಸಿದೆ.
ಆಸ್ಪತ್ರೆಯಲ್ಲಿ ಇಂದು ಶಶಿಕಲಾ ಅವರ ಕೋವಿಡ್ ಪರೀಕ್ಷೆ ಮಾಡಲಾಗಿದ್ದು ಎರಡನೇ ಪರೀಕ್ಷೆ ಇದೇ 30ರಂದು ನಡೆಯಲಿದೆ. ಎರಡೂ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದರೆ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದೆ.
ತಮಿಳುನಾಡಿನಲ್ಲಿ ಚಿನ್ನಮ್ಮ ಎಂದೇ ಖ್ಯಾತರಾಗಿರುವ ಶಶಿಕಲಾ ಅವರನ್ನು ಬರಮಾಡಿಕೊಳ್ಳಲು ಅವರ ಬಂಧುಗಳು, ಎಎಂಎಂಕೆ ಪಕ್ಷದ ಕಾರ್ಯಕರ್ತರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಇವರ ಬಿಡುಗಡೆಯಿಂದ ತಮುಳುನಾಡು ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿಯಾಗುವುದೇ ಎಂಬ ಕುತೂಹಲ ಅಲವು ರಾಜಕೀಯ ನಾಯಕರಲ್ಲಿ ಮನೆ ಮಾಡಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಪರಮಾಪ್ತೆಯಾಗಿದ್ದ ಶಶಿಕಲಾ ಎಐಎಡಿಎಂಕೆಯಲ್ಲಿ ಪ್ರಮುಖ ಸ್ಥಾನದ ಆಕಾಂಕ್ಷೆಯಿಟ್ಟುಕೊಂಡಿದ್ದವರು, ಆದರೆ ಜಯಲಲಿತಾ ಅವರ ನಿಧನ ನಂತರ ನಡೆದ ತಮಿಳುನಾಡಿನ ರಾಜಕೀಯ ವಿದ್ಯಮಾನಗಳಿಂದ ಎಐಎಡಿಎಂಕೆಯಿಂದ ಉಚ್ಛಾಟಿಸಲ್ಪಟ್ಟರು.