ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಮಲ್ಲಪ್ಪ ಚೆನ್ನವೀರಪ್ಪ ಮನಗೂಳಿ (85) ನಿಧನರಾಗಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಜ. 9ರಂದು ಅಪೋಲೋ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ವಿಜಯಪುರದ ಸಿಂಧಗಿ ಕ್ಷೇತ್ರದ ಶಾಸಕರಾಗಿದ್ದ ಅವರು ಪತ್ನಿ ಸಿದ್ದಮ್ಮ, ನಾಲ್ವರು ಪುತ್ರರು, ಓರ್ವ ಪುತ್ರಿ ಮತ್ತು ಮೊಮ್ಮಕ್ಕಳನು ಅಗಲಿದ್ದಾರೆ.
ಇಂದು ಮಧ್ಯಾಹ್ನ ಅವರ ಪಾರ್ಥಿವ ಶರೀರವನ್ನು ಸಿಂಧಗಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಅಂತ್ಯಕ್ರಿಯೆ ನಡೆಸುವ ಸಾಧ್ಯತೆ ಇದೆ.
ಮನಗೂಳಿ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಜಕೀಯ ಮತ್ತು ವೈಯಕ್ತಿಕವಾಗಿ ನನ್ನ ಹಲವು ದಶಕಗಳ ಒಡನಾಡಿಯಾಗಿದ್ದ ಮಾಜಿ ಸಚಿವ, ಸಿಂಧಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ಅವರ ನಿಧನದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಭಗವಂತ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಟ್ವೀಟ್ ಮಾಡಿದ್ದಾರೆ.
1936, ಸೆಪ್ಟೆಂಬರ್ 29ರಂದು ವಿಜಯಪುರದ ಬಸವನಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಜನಸಿದ ಮಲ್ಲಪ್ಪ ಚೆನ್ನವೀರಪ್ಪ ಅವರು SSLC ವರೆಗೂ ವಿದ್ಯಾಭ್ಯಾಸ ಮಾಡಿದ್ದರು. 1989ರಲ್ಲಿ ಸಿಂಧಗಿ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.
1994ರಲ್ಲಿ ಜನತಾ ದಳ ಪಕ್ಷದ ಟಿಕೆಟ್ ಪಡೆದು ಅದೇ ಕ್ಷೇತ್ರದಲ್ಲಿ ಗೆದ್ದು ವಿಧಾನಸಭೆಗೆ ಮೊದಲ ಬಾರಿ ಪ್ರವೇಶ ಮಾಡಿದ್ದರು. ಆಗ ಅಸ್ತಿತ್ವಕ್ಕೆ ಬಂದಿದ್ದ ಜೆಎಚ್ ಪಟೇಲ್ ನೇತೃತ್ವದ ಜನತಾ ದಳ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. ಆ ಬಳಿಕ ನಡೆದ ಸತತ ನಾಲ್ಕು ಚುನಾವಣೆಗಳಲ್ಲಿ ಸೋತಿದ್ದ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಎರಡನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಅವರು ತೋಟಗಾರಿಕಾ ಸಚಿವರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು.
ಎಂ. ಸಿ. ಮನಗೂಳಿ ವಿಜಯಪುರ ಜಿಲ್ಲೆಯಲ್ಲಿ ಮನಗೂಳಿ ಮುತ್ಯಾ ಎಂದೇ ಎಲ್ಲರಿಂದ ಪ್ರೀತಿಗೆ ಪಾತ್ರರಾಗಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದ ಅವರು, ಒಟ್ಟು 7 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. ಅದರಲ್ಲಿ 5 ಬಾರಿ ಸೋತಿದ್ದರೆ, ಗೆದ್ದ ಎರಡೂ ಬಾರಿ ಸಚಿವರಾಗಿದ್ದಷ್ಟೇ ಅಲ್ಲ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಕೊರೊನಾ ಕಾಲದಲ್ಲಿಯೂ 85ನೇ ವಯಸ್ಸಿನಲ್ಲಿಯೂ ಯುವಕರೂ ನಾಚುವಂತೆ ಓಡಾಡಿದ್ದರು.
ಆದರೆ, ಜನವರಿ 9 ರಂದು ತೀವ್ರ ಉಸಿರಾಟದ ತೊಂದರೆಯಿಂದಾಗಿ ಅಸ್ವಸ್ಥರಾಗಿದ್ದ ಅವರನ್ನು ವಿಜಯಪುರದಿಂದ ಕಲಬುರಗಿವರೆಗೆ ಆಂಬುಲೆನ್ಸ್ನಲ್ಲಿ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ ಏರ್ಲಿಫ್ಟ್ ಮಾಡುವ ಮೂಲಕ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ನಂತರ ಅವರನ್ನು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಬಸವನಾಡಿನ ಜನರ ಪ್ರೀತಿಯ ಮನಗೂಳಿ ಮುತ್ಯಾ ಇನ್ನು ನೆನಪು ಮಾತ್ರ.