ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಇಂದಿನಿಂದ ಏಳು ದಿನಗಳು ನಡೆಯುವ ವಿಧಾನಮಂಡಲ ಅಧಿವೇಶನ ಬೆಳಗ್ಗೆ 11 ಗಂಟೆಗೆ ಆರಂಭವಾಗಿದೆ. ಫೆ. 5ರವರೆಗೆ ನಡೆಯುವ ಈ ಅಧಿವೇಶನದಲ್ಲಿ ತೀವ್ರ ರಾಜಕೀಯ ಜಟಾಪಟಿ ನಡೆಯಲಿದ್ದು ವಿಪಕ್ಷಗಳು ಆಡಳಿತ ಪಕ್ಷದ ಲೋಪಗಳನ್ನು ಎತ್ತಿ ತೋರಿಸಲು ಸಿದ್ಧತೆ ಮಾಡಿಕೊಂಡಿವೆ.
ಈ ಮಧ್ಯೆ 11 ಮಸೂದೆಗಳು ಮಂಡನೆಗೆ ಸಿದ್ಧವಾಗಿವೆ. ಅವುಗಳ ಪೈಕಿ 2-3 ಮಸೂದೆಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ಬರಲಿವೆ. ಈ ನಡುವೆ ವಿಧಾನಪರಿಷತ್ನಲ್ಲಿ ಸಭಾಪತಿ ಸ್ಥಾನಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಒಪ್ಪಂದ ಆಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಅಧಿವೇಶನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆಯುವ ಸಾಧ್ಯತೆಯೇ ಹೆಚ್ಚಾಗಿದೆ.
ಇನ್ನು ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಿ.ಆರ್. ವಾಲಾ ಭಾಷಣ ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಬೆಳಗಾವಿಯಲ್ಲಿ ಅಧಿವೇಶನ ನಡೆಸದ ಸರ್ಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಉತ್ತರ ಕರ್ನಾಟಕ ನಿರ್ಲಕ್ಷ್ಯ, ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಮುಂತಾದ ಭಿತ್ತಿಪತ್ರ ಪ್ರದರ್ಶಿಸಿ ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಕೆಲವು ಹೊತ್ತು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು ಬಳಿಕ ಭಾಷಣ ಆಲಿಸಿದರು.
ಭಾಷಣ ಆರಂಭಿಸಿದ ರಾಜ್ಯಪಾಲರು ಅಗಲಿದ ನಾಯಕರಿಗೆ ಸಂತಾಪ ಸೂಚಿಸಿದರು. ಬಳಿಕ ಕೊರೊನಾ ವಿರುದ್ಧ ರಾಜ್ಯದ ಜನರು ಹೋರಾಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರ ಯಶಸ್ವಿ ಕಂಡಿದೆ. ಸರ್ಕಾರದ ನಿಯಮಗಳನ್ನ ಜನ ಅಚ್ಚುಕಟ್ಟಾಗಿ ಪಾಲಿಸಿದ್ದಾರೆ. ರಾಜ್ಯದಲ್ಲಿರೋ ಕೊರೊನಾ ವಾರಿಯರ್ಸ್‌ಗೆ ಧನ್ಯವಾದ. ಕೊರೊನಾಗೆ ಬಲಿಯಾದ ವಾರಿಯರ್ಸ್‌ಗೆ 30 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ರೈತರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ನೀಡಿದೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಹೆಚ್ಚಾಗುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಅಭಿವೃದ್ಧಿ ಸಾಧಿಸಿದ್ದೇವೆ. ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯದ ಆಸ್ಪತ್ರೆಗಳನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ ಜತೆಗೆ ಲಾಕ್ಡೌನ್ ವೇಳೆ ಜನರಿಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಸಮಸ್ಯೆ ಆಗದಂತೆ ಸರ್ಕಾರ ಕ್ರಮ ಕೈಗೊಂಡಿತ್ತು. ಸಂಕಷ್ಟದಲ್ಲಿದ್ದ ಜನರಿಗೆ ನಮ್ಮ ಸರ್ಕಾರ ಪರಿಹಾರ ಕಲ್ಪಿಸಿತ್ತು ಎಂದರು.
80 ಲಕ್ಷಕ್ಕಿಂತ ಹೆಚ್ಚು ಆರ್’ಟಿ-ಪಿಸಿಆರ್ ಪರೀಕ್ಷೆ ಮಾಡಲಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್ ಪರೀಕ್ಷೆ ಮಾಡಲಾಗಿದೆ. 1.36 ಲಕ್ಷ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ.ರೂ. 248 ಕೋಟಿ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ದಾಸೋಹ ಯೋಜನೆಯಡಿ ಉಚಿತವಾಗಿ ಪಡಿತರ ವಿತರಣೆ ಮಾಡಲಾಗಿದೆ. 8,919 ಕುಟಂಬಗಳಿಗೆ ಉಚಿತವಾಗಿ 10 ಕೆಜಿ ಅಕ್ಕಿ, 5 ಕೆಜಿ ಗೋಧಿ ವಿತರಣೆ ಮಾಡಲಾಗಿದೆ. ಆಟೋ ಚಾಲಕರು, ಮಡಿವಾಳರಿಗೆ ಹಣಕಾಸು ನೆರವು ನೀಡಲಾಗಿದೆ. 63,59,000 ಫಲಾನುಭವಿಗಳಿಗೆ ಹಣಕಾಸು ನೆರವು ಹಾಗೂ ರೂ. 5,372 ಕೋಟಿ ರೂ. ನೀಡಲಾಗಿದೆ ಎಂದರು.
16.45 ಲಕ್ಷ ಕಾರ್ಮಿಕರಿಗೆ 824 ಕೋಟಿ ರೂ. ನೀಡಲಾಗಿದೆ. 11,770 ಚರ್ಮ ಕುಶಲ ಕರ್ಮಿಗಳಿಗೆ ತಲಾ 5 ಸಾವಿರ ರೂ. ಧನ ಸಹಾಯ ಮಾಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 51 ಲಕ್ಷ ರೈತರಿಗೆ ತಲಾ 2,000 ಹೆಚ್ಚುವರಿ ಹಣ ನೀಡಿದ್ದೇವೆ. ಇದಕ್ಕಾಗಿ ಒಟ್ಟು 1,020 ಕೋಟಿ ರೂ. ನೀಡಲಾಗಿದೆ. ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ನೀಡಿ 61,379 ಮೆಟ್ರಿಕ್ ಟನ್ ಭತ್ತ, 1.93 ಮೆಟ್ರಿಕ್ ಟನ್ ರಾಗಿ ಹಾಗೂ 9,256 ಮೆಟ್ರಿಕ್ ಟನ್ ಜೋಳ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ 17,863 ಕೊಟಿ ರೂ.ಗಳನ್ನು ಪರಿಶಿಷ್ಟ ಜಾತಿ ಹಾಗೂ 7754 ಕೊಟಿ ರೂ.ಗಳನ್ನು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ನೀಡಿದೆ. ವಿವಿಧ ನಿಗಮಗಳ ಮೂಲಕ 15837 ಜನರಿಗೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಭೂ ಒಡೆತನ ಯೋಜನೆಯಡಿಯಲ್ಲಿ 3061 ಎಕರೆ ಭೂಮಿಯನ್ನು ಖರೀದಿಸಿ ಫಲಾನುಭವಿಗಳಿಗೆ ನೀಡಲಾಗಿದೆ.
ಬೋಧನೆಯ ಗುಣಮಟ್ಟವನ್ನು ಉತ್ತಮಗೊಳಿಸಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳಿಗೆ ಹೊಸದಾಗಿ 1021 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಕರ್ನಾಟಕ ನಾವೀನ್ಯತೆ ಪ್ರಾಧಿಕಾರವನ್ನು ರಚಿಸಿದೆ.
46,378 ಮಳೆ ನೀರು ಕೊಯ್ಲು ನಿರ್ಮಿಸಲಾಗಿದೆ. ಪ್ರಧಾನಿ ಕೃಷಿ ಸಿಂಚಾಯಿ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಮಳೆಯಾಶ್ರಿತ ಪ್ರದೇಶದ 2.76 ಲಕ್ಷ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. 2.10 ಕೋಟಿ ಜಮೀನುಗಳ ಬೆಳೆ ಸಮೀಕ್ಷೆ ಮಾಡಿದ್ದು, ಇದರಲ್ಲಿ 80 ಲಕ್ಷ ರೈತರೇ ಖುದ್ದು ಸಮೀಕ್ಷೆ ಮಾಡಿದ್ದಾರೆ ಎಂದು ವಿವರ ನೀಡಿದರು.
32,878 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆ ಮಾಡಲಾಗಿದೆ. ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು, ಮಂಡ್ಯ, ಕೊಪ್ಪಳ, ಬೆಳಗಾವಿ, ಉಡುಪಿ ಜಿಲ್ಲೆಗಳ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬುವುದಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ನಾವೀನ್ಯತೆಯನ್ನು ಸಂಯೋಜಿಸಲು, ಹೂಡಿಕೆಗಳನ್ನು ಉತ್ತೇಜಿಸಲು, ಕಾರ್ಯತಂತ್ರ ರೂಪಿಸಲು ಬ್ರಾಂಡಿಂಗ್ ಅನ್ನು ಹೆಚ್ಚಿಸಲು ಹಾಗೂ ಜಾಗತಿಕ ನಾವೀನ್ಯತೆ ಸಹಕಾರತ್ವವನ್ನು ಹೆಚ್ಚಿಸಲು ಹಾಗೂ ಪ್ರಸ್ತಾವಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕರ್ನಾಟಕ ಡಿಜಿಟಲ್ ಹಣಕಾಸು ಮಿಷನ್ ರೂಪಿಸಲಾಗಿದೆ. ಬೆಂಗಳೂರಿನ ಹೊರಗೆ ಮಾಹಿತಿ ತಂತ್ರಜ್ಞಾನವನ್ನು ಉತ್ತೇಜಿಸುವುದಕ್ಕಾಗಿ ವಿಶೇಷ ಗಮನ ಕೇಂದ್ರೀಕರಿಸುವುದರೊಂದಿಗೆ ಹೊಸ ಮಾಹಿತಿ ತಂತ್ರಜ್ಞಾನ ನೀತಿ-2020-25 ಅನ್ನು ಘೋಷಿಸಿದೆ ಎಂದರು.
ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ: ಸಾಧಕರ ಗುಣಗಾನ
ವಿಧಾನಮಂಡಲನದ ಜಂಟಿ ಅಧಿವೇಶನದ ಬಳಿಕ ನಡೆದ ಕಲಾಪದಲ್ಲಿ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಂತಾಪ ಸೂಚಕ ನಿರ್ಣಯ ಮಂಡಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿದರು.
ದಿ.ಉಪ ಸಭಾಪತಿ ಧರ್ಮೇಗೌಡ, ಮಾಜಿ ಸಚಿವೆ ರೇಣುಕಾ ರಾಜೇಂದ್ರನ್, ಮಾಜಿ ಶಾಸಕರಾದ ಪ್ರೇಮಾನಂದ ಜೈವಂತ, ಬಸವಂತ ರೆಡ್ಡಿ ಪಾಟೀಲ್ ಮೋತಕಹಲ್ಲಿ, ಮಾಜಿ ಕೇಂದ್ರ ಸಚಿವ ಬೂಟಾ ಸಿಂಗ್, ಉದ್ಯಮಿ ಆರ್.ಎನ್.ಶೆಟ್ಟಿ, ಡಾ.ಬನ್ನಂಜೆ ಗೋವಿಂದಾಚಾರ್ಯ, ಡಾ.ಹರ್ಷಾನಂದ ಸ್ವಾಮೀಜಿ, ಡಾ.ರೊದ್ದಂ ನರಸಿಂಹ, ಅವರ ನಿಧನಕ್ಕೆ ಸಭಾಧ್ಯಕ್ಷರು ಸಂತಾಪ ಸೂಚಿಸಿದರು.
366 ಯೋಜನೆಗಳಿಗೆ ಅನುಮೋದನೆ: ರಾಜ್ಯಪಾಲ
ಹೊಸ ಮರಳು ನೀತಿ -2020 ಅನ್ನು ರೂಪಿಸಿದ , ಇದರಲ್ಲಿ ಹಳ್ಳ , ಕೆರೆ , ಸರೋವರಗಳಲ್ಲಿ ದೊರೆಯುವ ಮರಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉತ್ತಮ ಮೇಲ್ವಿಚಾರಣೆಗಾಗಿ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಅಧಿನಿಯಮ, 2011 ಕ್ಕೆ ತಿದ್ದುಪಡಿ ಮಾಡಲಾಗಿದೆ .
ಸಾರಿಗೆ ಇಲಾಖೆಯು 4 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೆಸ್ಕಾಂ ಮೂಲಕ ಬೆಂಗಳೂರಿನಲ್ಲಿ 126 ಎಸಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ. ಕರ್ನಾಟಕ ರಸ್ತೆ ಸಾರಿಗೆ ನಿಗಮವು ತೀರ ಬಸ್ಸುಗಳನ್ನು “ ಶೌಚಾಲಯ ಎಂಬ ಹೆಸರಿನ ಸುಸಜ್ಜಿತ ಮಹಿಳಾ ಶೌಚಾಲಯವಾಗಿ ಪರಿವರ್ತಿಸಿದ . ಈ ಉಪಕ್ರಮವು ” Economic Times Global Smart City ” ಪ್ರಶಸ್ತಿಯನ್ನು ಪಡೆದಿದೆ. ಹೊಸ ಪ್ರವಾಸೋದ್ಯಮ ನೀತಿ , 2020-25 ಅನ್ನು ರೂಪಿಸಿದೆ ಎಂದು ತಿಳಿಸಿದರು.
ಹೊಸ ಕೈಗಾರಿಕಾ ನೀತಿ 2020-25 ಅನ್ನು ಜಾರಿಗೆ ತಂದಿದೆ. ಪ್ರತಿ ವರ್ಷ ಶೇಕಡ 10 ರಷ್ಟು ಕೈಗಾರಿಕಾ ಬೆಳವಣಿಗೆ ದರವನ್ನು ನಿರ್ವಹಿಸುವುದರೊಂದಿಗೆ , 5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸುವ , 20 ಲಕ್ಷ ಉದ್ಯೋಗಾವಕಾಶಗಳನ್ನು ಸೃಜಿಸುವ , ಹಾಗೂ ತಂತ್ರಜ್ಞಾನವನ್ನು ಅಳವಡಿಕೆಗಾಗಿ ಮತ್ತು ಅವಿಷ್ಕಾರಕ್ಕಾಗಿ ಪರಿಸರ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಗುರಿಗಳನ್ನು ಹೊಂದಿರುತ್ತದೆ. ಈ ವರ್ಷದಲ್ಲಿ ರಾಜ್ಯ 53295 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ 1.54 ಉದ್ಯೋಗವನ್ನು ಸೃಜಿಸುವ 366 ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದರು.
ಸ್ಮಾರ್ಟ್ ಸಿಟಿ ಅಭಿಯಾನದಡಿ 7 ಸ್ಮಾರ್ಟ್ ಸಿಟಿಗಳಲ್ಲಿ 400 ಕೋಟಿ ರೂಪಾಯಿಯ 162 ಯೋಜನೆಗಳನ್ನು ಪೂರ್ಣಗೊಳಿಸಲಾಗಿದ್ದು 6,233 ಕೋಟಿ ರೂಪಾಯಿಗಳ 345 ಯೋಜನೆಗಳು ಪ್ರಗತಿಯಲ್ಲಿವೆ
ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು 52 ಬೆಂಗಳೂರು ಮಹಾನಗರ ಸಾರಿಗೆ ನಿಗಮವು 6 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸಿದೆ. 4,755 ಕೋಟಿ ರೂ.ಗಳಷ್ಟು ಕಿ.ಮೀ. ರಸ್ತೆಗಳನ್ನು 202 ಸೇತುವೆಗಳನ್ನು ಅನುಷ್ಠಾನಗೊಳಿಸಲು ಅನುಮೋದಿಸಿದೆ. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಾಲೊನಿಗಳಲ್ಲಿ 447 ಕಿ.ಮೀ. ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿದೆ. ಮತ್ತು ಯೋಜನೆಯಡಿಯಲ್ಲಿ 588 ಕಿ.ಮೀ. ರಸ್ತೆ ಅಭಿವೃದ್ಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ 143 ಕಿ.ಮೀ. ರಸ್ತೆ ಅಭಿವೃದ್ಧಿ ಕಾರ್ಯವು ಪೂರ್ಣಗೊಂಡಿದೆ.
9,601 ಕಿ.ಮಿ. ಜಿಲ್ಲಾ ಹೆದ್ದಾರಿಗಳನ್ನು ರಾಜ್ಯ ಹೆದ್ದಾರಿಗಳಾಗಿ ಮೇಲ್ಮರ್ಜೆಗೆ ಏರಿಸಲಾಗಿದ್ದು , 15,510 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಪ್ರಧಾನ ಜಿಲ್ಲಾ ರಸ್ತೆಗಳಾಗಿ ಮೇಲ್ಮರ್ಜೆಗೆ ಏರಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂಚಾರವು ಸುಸ್ಥಿರಗೊಳಿಸಲು 1,850 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಸಭಾಪತಿ ಸ್ಥಾನ ಜೆಡಿಎಸ್ಗೆ ಬಿಟ್ಟುಕೊಟ್ಟ ಬಿಜೆಪಿ
ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ನಿಂದ ಈ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊರಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಉಪಸಭಾಪತಿ ಸ್ಥಾನಕ್ಕೆ ಎಂ.ಕೆ. ಪ್ರಾಣೇಶ್ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಂಖ್ಯೆ ಇಲ್ಲದಿದ್ದರೂ ಉಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಕೆ.ಸಿ. ಕೊಂಡಯ್ಯ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡುತ್ತಿರುವುದು ಜಗಜ್ಜಾಹೀರಾಗಲೀ ಎಂಬುದು ಕೊಂಡಯ್ಯ ಅವರನ್ನು ಕಣಕ್ಕಿಳಿಸುತ್ತಿರುವುದರ ಹಿಂದಿನ ತಂತ್ರ ಎಂದು ಬಣ್ಣಿಸಲಾಗುತ್ತಿದೆ.